ADVERTISEMENT

ದೆಹಲಿ: ಬಾಲಕಿ ಕೈಕಾಲು ಕಟ್ಟಿ ಸುಡು ಬಿಸಿಲಿನಲ್ಲಿ ಮಾಳಿಗೆ ಮೇಲೆ ಮಲಗಿಸಿದ ತಾಯಿ!

ಪಿಟಿಐ
Published 9 ಜೂನ್ 2022, 1:50 IST
Last Updated 9 ಜೂನ್ 2022, 1:50 IST
ಟ್ವಿಟ್ಟರ್ ವಿಡಿಯೊ ಸ್ಕ್ರೀನ್‌ಗ್ರ್ಯಾಬ್
ಟ್ವಿಟ್ಟರ್ ವಿಡಿಯೊ ಸ್ಕ್ರೀನ್‌ಗ್ರ್ಯಾಬ್   

ನವದೆಹಲಿ: ದೆಹಲಿಯ ಸುಡು ಬಿಸಿಲಿನಲ್ಲಿ 5 ವರ್ಷದ ಬಾಲಕಿಯನ್ನು ಮಾಳಿಗೆ ಮೇಲೆ ಮಲಗಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಬಿಸಿಲಿನಲ್ಲಿ ಮಲಗಿಸಿ ಹಿಂಸಿಸಲಾಗಿದೆ.

ವಿಡಿಯೊ ನೋಡಿರುವ ಜಾಲತಾಣಿಗರು ಈ ಕೃತ್ಯ ಎಸಗಿದ ಕ್ರೂರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿ ಜೂನ್ 2 ರಂದು ಈ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳು ಹೋಮ್‌ವರ್ಕ್ ಮಾಡದಿದ್ದಕ್ಕಾಗಿ ಆಕೆಯ ತಾಯಿಯೇ ಈ ಶಿಕ್ಷೆ ನೀಡಿದ್ದರು. ಕೈಕಾಲುಗಳನ್ನು ಕಟ್ಟಿ ಮಲಗಿಸಿದ್ದರು ಎಂದು ಅವರು ಹೇಳಿದ್ದಾರೆ.

ADVERTISEMENT

ಬಾಲಕಿಯ ಕುಟುಂಬವನ್ನು ಪತ್ತೆ ಮಾಡಲಾಗಿದ್ದು, ಸೂಕ್ತ ಕ್ರಮ ಜರುಗಿಸುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

‘ಬಾಲಕಿಯನ್ನು ಸುಡು ಬಿಸಿಲಿನಲ್ಲಿ ಮಾಳಿಗೆ ಮೇಲೆ ಕಟ್ಟಿ ಹಾಕಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಾಲಕಿಯ ಗುರುತು ಮತ್ತು ಈ ಕೃತ್ಯಕ್ಕೆ ಕಾರಣರಾದವರ ಪತ್ತೆಗೆ ಎಲ್ಲ ಪ್ರಯತ್ನ ಮಾಡಿದ್ದೇವೆ. ಬಾಲಕಿಯ ಕುಟುಂಬದ ಮಾಹಿತಿ ದೊರೆತಿದ್ದು, ಸೂಕ್ತ ಕ್ರಮ ಜರುಗಿಸುತ್ತೇವೆ’ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಮನೆಯ ಮಹಿಳೆ ಈ ವಿಡಿಯೊ ಚಿತ್ರೀಕರಿಸಿದ್ದು, ಬಾಲಕಿಯು ಅಳುತ್ತಾ ಬಂಧನದಿಂದ ಪಾರಾಗಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

25 ಸೆಕೆಂಡುಗಳ ವಿಡಿಯೊ ಮಾಡಿರುವ ಮಹಿಳೆ, ಈ ಬಾಲಕಿಯನ್ನು ಆಕೆಯ ತಾಯಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸುಡು ಬಿಸಿಲಿನಲ್ಲಿ ಕೈಕಾಲು ಕಟ್ಟಿ ಎಡಕ್ಕೆ ತಿರುಗಿಸಿ ಮಲಗಿಸಿದ್ದಾಳೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ವಿಡಿಯೊ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಪೊಲೀಸರಿಗೆ ವಿಡಿಯೊ ಟ್ಯಾಗ್ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ಇದು ಭಯಾನಕ.. ಕೂಡಲೇ ಇತ್ತ ಗಮನ ಹರಿಸಿ’ಎಂದು ರಾಹುಲ್ ಸಿಂಗ್ ಎಂಬುವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ಆನಂದ್ ವರ್ಮಾ,‘ಈ ವಿಚಾರದ ಬಗ್ಗೆ ಕೂಡಲೇ ಗಮನಹರಿಸಿ’ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.