ಪ್ರಧಾನಿ ನರೇಂದ್ರ ಮೋದಿ
ಪಿಟಿಐ
ನವದೆಹಲಿ: ಅಮೆರಿಕದ ಲೂಸಿಯಾನ ರಾಜ್ಯದ ನ್ಯೂ ಅರ್ಲಿನ್ಸ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬಲವಾಗಿ ಖಂಡಿಸಿದ್ದಾರೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನ್ಯೂ ಅರ್ಲಿನ್ಸ್‌ನಲ್ಲಿ ನಡೆದ ಹೇಡಿತನ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರು ಮತ್ತು ಅವರ ಕುಟುಂಬದವರಿಗಾಗಿ ನಾವು ಪ್ರಾರ್ಥಿಸುತ್ತೇವೆ’ ಎಂದು ಹೇಳಿದ್ದಾರೆ.
ನ್ಯೂ ಅರ್ಲಿನ್ಸ್‌ನ ಬೌರ್ಬನ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನ ಸಂದಣಿಯ ಮೇಲೆ ವ್ಯಕ್ತಿಯೊಬ್ಬ ಬುಧವಾರ ಟ್ರಕ್ ಹರಿಸಿದ್ದ. ಅಪಘಾತದಲ್ಲಿ 15 ಜನ ಸ್ಥಳದಲ್ಲಿಯೇ ಮೃತಪಟ್ಟು, ಸುಮಾರು 30 ಮಂದಿ ಗಾಯಗೊಂಡಿದ್ದರು.
ಶಂಕಿತನನ್ನು ಶಮ್ಸುದ್–ದಿನ್ ಬಹರ್ ಜಬ್ಬರ್ ಎಂದು ಗುರುತಿಸಲಾಗಿದ್ದು, ಕೃತ್ಯ ನಡೆದ ಬೆನ್ನಲ್ಲೇ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದನು. ಆತ ಟ್ರಕ್ ಅನ್ನು ಬಾಡಿಗೆಗೆ ಪಡೆದು ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಟ್ರಕ್‌ನಲ್ಲಿ ಐಎಸ್ ಸಂಘಟನೆಯ ಧ್ವಜ ಪತ್ತೆಯಾಗಿದ್ದು, ಈ ದಾಳಿಯನ್ನು ಭಯೋತ್ಪಾದನಾ ಸಂಚು ಎಂದು ಅಧಿಕಾರಿಗಳು ಕರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.