ADVERTISEMENT

2 ದಿನ ಕಾಲಾವಕಾಶ ನೀಡಿದ ಸುಪ್ರೀಂ: ಕ್ಷಮೆ ಕೇಳುವ ಪ್ರಮೆಯವೇ ಇಲ್ಲ ಎಂದ ಭೂಷಣ್

ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಹೇಳಿಕೆ ಮರು ಪರಿಶೀಲನೆಗೆ ‘ಸುಪ್ರೀಂ’ ಆದೇಶ

ಪಿಟಿಐ
Published 20 ಆಗಸ್ಟ್ 2020, 21:15 IST
Last Updated 20 ಆಗಸ್ಟ್ 2020, 21:15 IST
ಪ್ರಶಾಂತ್‌ ಭೂಷಣ್
ಪ್ರಶಾಂತ್‌ ಭೂಷಣ್   

ನವದೆಹಲಿ: ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯನ್ನು ಮರು ಪರಿಶೀಲಿಸಲುಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ಸುಪ್ರೀಂಕೋರ್ಟ್‌ ಎರಡು ದಿನಗಳ ಕಾಲಾವಕಾಶ ನೀಡಿದೆ.‌

ಸುಪ್ರೀಂಕೋರ್ಟ್‌ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್‌ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ್ ತಪ್ಪಿತಸ್ಥರು ಎಂದು ಆಗಸ್ಟ್‌14ರಂದು‌ ಸುಪ್ರೀಂಕೋರ್ಟ್ ಆದೇಶಿಸಿತ್ತು. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಕ್ಷಮೆ ಯಾಚಿಸುವುದಿಲ್ಲ ಎಂದೂ ಭೂಷಣ್‌ ಹೇಳಿದ್ದರು. ಭೂಷಣ್ ಈಗಾಗಲೇ ಶಿಕ್ಷೆಗೊಳಗಾಗಿದ್ದಾರೆ.ನ್ಯಾಯಾಂಗ ನಿಂದನೆ ಅಡಿಯಲ್ಲಿ‌ಅವರಿಗೆ ಮತ್ತೆ ಶಿಕ್ಷೆ ವಿಧಿಸಬಾರದು ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಕೋರಿದರು. ಕ್ಷಮೆ ಕೇಳುವುದಿಲ್ಲ ಎಂದು ಭೂಷಣ್‌ ಹೇಳಿದ್ದಾರೆ. ಅವರು ಆ ಹೇಳಿಕೆಯನ್ನು ಮರುಪರಿಶೀಲಿಸು ವವರೆಗೂ ನಿಮ್ಮ ಮನವಿಯನ್ನು ನಾವು ಪುರಸ್ಕರಿಸಲಾಗುವುದಿಲ್ಲ ಎಂದು ಪೀಠವು ವೇಣುಗೋಪಾಲ್‌ ಅವರಿಗೆ ತಿಳಿಸಿತು. ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಲಾಯಿತು.

ಅರ್ಜಿ ವಜಾ:ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತನ್ನ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವವರೆಗೂ ಹಾಗೂ ಅದನ್ನು ಪರಿಗಣಿಸುವವರೆಗೂ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಭೂಷಣ್, ಬುಧವಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ತಿರಸ್ಕರಿಸಿತು. ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಆದೇಶದ ವಿರುದ್ಧ ಪರಿಶೀಲನೆ ನಡೆಸುವವರೆಗೂ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಪೀಠವು ಭೂಷಣ್‌ ಅವರಿ‌ಗೆ ಭರವಸೆ ನೀಡಿತು. ಪ್ರಕರಣದ ವಿಚಾರಣೆಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೇಳುವ ಮೂಲಕ ನಮಗೆ ಇರುಸು ಮುರುಸು ಉಂಟುಮಾಡುತ್ತಿದ್ದೀರಾ ಎಂದು ಭೂಷಣ್‌ ಅವರ ಪರ ವಕೀಲ ದುಷ್ಯಂತ್‌‌ ದಾವೆ ಅವರಿಗೆ ಪೀಠ ಹೇಳಿತು.

ADVERTISEMENT

‘ನಾನು ಶೀಘ್ರವೇ ನಿವೃತ್ತನಾಗಲಿದ್ದೇನೆ. ಹೀಗಾಗಿ ಪ್ರಕರಣವನ್ನು ಮುಂದೂಡುವಂತೆ ಕೋರಬಾರದು’ ಎಂದು ನ್ಯಾಯಮೂರ್ತಿ ಮಿಶ್ರಾ ಅವರು ತಿಳಿಸಿದರು.

ಕ್ಷಮೆ ಕೇಳುವ ಪ್ರಮೇಯವೇ ಇಲ್ಲ: ಪ್ರಶಾಂತ್‌ ಭೂಷಣ್‌
‘ನಾನು ವಿವೇಚನೆ ಇಲ್ಲದೆ ಯಾವ ಟ್ವೀಟ್‌ ಕೂಡ ಮಾಡಿಲ್ಲ. ‌ಅನ್ಯಮನಸ್ಕನಾಗಿ ಬರೆದಿಲ್ಲ. ನಂಬಿರುವ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಮೇಯವೇ ಎದುರಾಗುವುದಿಲ್ಲ’ ಎಂದು ವಕೀಲ ಪ್ರಶಾಂತ್‌ ಭೂಷಣ್‌ ಅವರು ಗುರುವಾರ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಭೂಷಣ್‌ ಅವರು ‘ನಾನು ಕ್ಷಮೆ ಕೇಳುವುದಿಲ್ಲ. ಮನವಿಯನ್ನೂ ಮಾಡುವುದಿಲ್ಲ. ನ್ಯಾಯಾಲಯ ನೀಡುವ ಶಿಕ್ಷೆಯನ್ನು ಸಂತಸದಿಂದಲೇ ಸ್ವೀಕರಿಸುತ್ತೇನೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಮೂರು ದಶಕಗಳ ಕಾಲ ಯಾವ ನ್ಯಾಯಾಲಯದ ಘನತೆ, ಗೌರವವನ್ನು ಎತ್ತಿಹಿಡಿದಿದ್ದೆನೊ, ಅದೇ ನ್ಯಾಯಾಲಯ ನನ್ನನ್ನು ದೋಷಿ ಎಂದು ನಿರ್ಧರಿಸಿದೆ. ಮನಸ್ಸಿಗೆ ತುಂಬಾ ನೋವಾಗಿದೆ. ಶಿಕ್ಷೆ ನೀಡುತ್ತಿದೆ ಎಂಬ ಕಾರಣಕ್ಕೆ ದುಃಖಿತನಾಗುತ್ತಿಲ್ಲ. ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲವಲ್ಲ ಎಂಬುದನ್ನು ನೆನೆದು ನೋವಾಗಿದೆ’ ಎಂದರು. ‘ನಾನು ದುರುದ್ದೇಶಪೂರಿತ ಮತ್ತು ಕೀಳು ಮಟ್ಟದ ಟೀಕೆ ಮಾಡಿರುವುದಾಗಿ ನ್ಯಾಯಾಲಯ ಹೇಳಿದೆ. ಇದನ್ನು ಕೇಳಿ ನಿಜಕ್ಕೂ ಆಘಾತವಾಗಿದೆ. ನನ್ನ ಅಭಿಪ್ರಾಯ ಆಲಿಸದೆ ನನ್ನನ್ನು ದೋಷಿ ಎಂದು ನಿರ್ಧರಿಸಿಬಿಟ್ಟಿದೆ. ನ್ಯಾಯಾ ಲಯದ ಏಪಕ್ಷೀಯ ನಿಲುವಿನಿಂದ ಬೇಸರವಾಗಿದೆ ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.