ADVERTISEMENT

ಗಂಡನ ಜತೆ ಬಾಳಲು ಹೆಂಡತಿಗೆ ಬಲವಂತ ಸಲ್ಲದು: ಹೈಕೋರ್ಟ್‌

ಗುಜರಾತ್‌ ಹೈಕೋರ್ಟ್‌ ತೀರ್ಪು

ಪಿಟಿಐ
Published 30 ಡಿಸೆಂಬರ್ 2021, 18:47 IST
Last Updated 30 ಡಿಸೆಂಬರ್ 2021, 18:47 IST
   

ಅಹಮದಾಬಾದ್‌: ಹೆಂಡತಿಯು ಗಂಡನ ಜೊತೆಗೇ ಬಾಳಬೇಕು ಮತ್ತು ದಾಂಪತ್ಯದ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಬಲವಂತ ಮಾಡುವಂತಿಲ್ಲ. ಹೀಗೆ ಮಾಡಬೇಕು ಎಂದು ನ್ಯಾಯಾಲಯ ಕೂಡ ಆದೇಶ ನೀಡುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

ಪತಿಯು ಎರಡನೇ ಮದುವೆಯಾದರೆ, ಗಂಡನ ಜೊತೆ ಬದುಕಲುಮುಸ್ಲಿಂ ಮಹಿಳೆಯು ನಿರಾಕರಿಸಬಹುದು. ಏಕೆಂದರೆ, ‘ಮುಸ್ಲಿಂ ಕಾನೂನು ಬಹುಪತ್ನಿತ್ವವನ್ನು ಒಪ್ಪುತ್ತದೆಯಾದರೂ ಅದನ್ನು ಪ್ರೋತ್ಸಾಹಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.

ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯು ಗಂಡನ ಹಕ್ಕುಗಳ ಮೇಲೆ ಮಾತ್ರ ಅವಲಂಬಿತ ಅಲ್ಲ. ಗಂಡನ ಜತೆಗೇ ಬಾಳಬೇಕು ಎಂದು ಬಲವಂತ ಮಾಡುವುದು ಹೆಂಡತಿಯನ್ನು ತಾರತಮ್ಯದಿಂದ ನೋಡಿದಂತೆ ಆಗುವುದಿಲ್ಲವೇ ಎಂಬುದನ್ನೂ ಕೌಟುಂಬಿಕ ನ್ಯಾಯಾಲಯಗಳು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನಿರಲ್‌ ಮೆಹ್ತಾ ಅವರ ಪೀಠವು ಹೇಳಿದೆ.

ADVERTISEMENT

ಗಂಡನ ಮನೆ ತೊರೆದಿದ್ದ ಮುಸ್ಲಿಂ ಮಹಿಳೆಯು ಮರಳಿ ಗಂಡನ ಮನೆಗೆ ಹೋಗಬೇಕು. ವೈವಾಹಿಕ ಕರ್ತವ್ಯ
ಗಳನ್ನು ನಿರ್ವಹಿಸಬೇಕು ಎಂದು ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯವು 2021ರ ಜುಲೈನಲ್ಲಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2010ರ ಮೇಯಲ್ಲಿ ಮಹಿಳೆಯ ಮದುವೆ ಆಗಿತ್ತು.

ಮಹಿಳೆಯು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು 2017ರ ಜುಲೈನಲ್ಲಿ ಮಗನನ್ನು ಕರೆದುಕೊಂಡು ಗಂಡನ ಮನೆ ಬಿಟ್ಟು ಹೋಗಿದ್ದರು. ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಯಾಗುವಂತೆ ಗಂಡ ಮತ್ತು‍ ಗಂಡನ ಮನೆಯವರು ಒತ್ತಡ ಹೇರಿದ್ದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಮಹಿಳೆಯು ಕೆಲಸದಲ್ಲಿ ಇರುವುದರಿಂದಾಗಿ ಮನೆಯ ಜವಾಬ್ದಾರಿ ನಿರ್ವಹಿಸಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ, ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟು ಅವರು ಮನೆ ಬಿಟ್ಟು ಹೋಗಿದ್ದಾರೆ ಎಂದು ಕೌಟುಂಬಿಕ ಕೋರ್ಟ್‌ ಭಾವಿಸಿತ್ತು ಎಂದು ಪೀಠ ಹೇಳಿದೆ.

ಮಹಿಳೆಯು ಮನೆ ಬಿಟ್ಟು ಹೋದ ಬಳಿಕ ಗಂಡ ಮತ್ತೊಂದು ಮದುವೆ ಆಗಿದ್ದಾನೆ. ಹೀಗಿರುವಾಗ ಕೌಟುಂಬಿಕ ನ್ಯಾಯಾಲಯವು ಗಂಡನ ಪರವಾಗಿ ಆದೇಶ ನೀಡಿದ್ದು ಎಷ್ಟು ಸರಿ ಎಂದೂ ಪೀಠವು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.