ADVERTISEMENT

ಮುಂಬೈ: ಕಟ್ಟಡ ಕುಸಿತ, ಮಹಿಳೆ ಸಾವು, 6 ಮಂದಿ ರಕ್ಷಣೆ

ಐದು ಅಂತಸ್ತಿನ ಹಳೆಯ ಕಟ್ಟಡ ಕುಸಿತ

ಪಿಟಿಐ
Published 2 ಸೆಪ್ಟೆಂಬರ್ 2020, 21:19 IST
Last Updated 2 ಸೆಪ್ಟೆಂಬರ್ 2020, 21:19 IST

ಮುಂಬೈ: ದಕ್ಷಿಣ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಬುಧವಾರ ಐದು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 65 ವರ್ಷ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 7.30ರ ಸುಮಾರಿಗೆ ಡೋಂಗ್ರಿ ಪ್ರದೇಶದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಯ ರಜಾಖ್ ಚೇಂಬರ್ ಬಿಲ್ಡಿಂಗ್ ಕುಸಿದಿದ್ದು, ಘಟನೆಯಲ್ಲಿ ಮುಮ್ತಾಜ್ ಸುಧನ್‌ವಾಲಾ (65) ಎನ್ನುವವರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇತರ ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ಬಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕಟ್ಟಡ ಶಿಥಿಲಗೊಂಡಿದ್ದು, ಈ ಹಿಂದೆಯೇ ಅಪಾಯಕಾರಿ ಎಂದು ಘೋಷಿಸಿ, ಮಂಗಳವಾರವಷ್ಟೇ ಕಟ್ಟಡವನ್ನು ಖಾಲಿ ಮಾಡಿಸಲಾಗಿತ್ತು. ಹಾಗಾಗಿ, ದೊಡ್ದ ದುರಂತವೊಂದು ತಪ್ಪಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.

ADVERTISEMENT

ಕಟ್ಟಡದ ಅಪಾಯಕಾರಿ ಸ್ಥಿತಿ ಕುರಿತು ಬಿಎಂಸಿ ಸಂಬಂಧಿಸಿದ ಡೆವಲಪರ್‌ಗಳಿಗೆ ಕಾಲಕಾಲಕ್ಕೆ ನೋಟಿಸ್ ಅನ್ನೂ ಜಾರಿಗೆ ಮಾಡಿತ್ತು ಎನ್ನಲಾಗಿದೆ.

ಬಿಎಂಸಿ ಪ್ರಕಾರ, ಮಹಾರಾಷ್ಟ್ರ ವಸತಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಎಂಎಚ್‌ಡಿಎ) ಈ ಕಟ್ಟಡ ವಾಸಿಸಲು ಯೋಗ್ಯವಲ್ಲ ಎಂದು ಹೇಳಲಾಗಿತ್ತು.

ದುರಂತ ನಡೆದ ಸ್ಥಳಕ್ಕೆ ಮೇಯರ್ ಕಿಶೋರಿ ಪೆಡ್ನೇಕರ್, ದಕ್ಷಿಣ ಮುಂಬೈನ ಶಿವಸೇನಾದ ಲೋಕಸಭಾ ಸದಸ್ಯ ಅರವಿಂದ ಸಾವಂತ್, ಎಂಎಚ್‌ಡಿಎ ಅಧ್ಯಕ್ಷ ವಿನೋದ್ ಘೋಸಲ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.