ADVERTISEMENT

ಮನೆಗೆಲಸದ ಬಾಲಕಿಗೆ ಚಿತ್ರಹಿಂಸೆ: ಮಹಿಳಾ ಪೈಲಟ್‌, ಪತಿ ನ್ಯಾಯಾಂಗ ವಶಕ್ಕೆ

ಪಿಟಿಐ
Published 20 ಜುಲೈ 2023, 14:14 IST
Last Updated 20 ಜುಲೈ 2023, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೈರುತ್ಯ ದೆಹಲಿಯ ದ್ವಾರಕಾ ಪ‍್ರದೇಶದಲ್ಲಿ ಮನೆಗೆಲಸಕ್ಕೆ ನೇಮಿಸಿಕೊಂಡಿದ್ದ 10 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮಹಿಳಾ ಪೈಲಟ್‌ ಮತ್ತು ಆಕೆಯ ಪತಿಯನ್ನು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆಗಸ್ಟ್‌ 2ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಹಿಳಾ ಪೈಲಟ್‌ ಪೂರ್ಣಿಮಾ ಬಾಗ್ಚಿ  ಮತ್ತು ಆಕೆಯ ಪತಿ ಕೌಶಿಕ್ ಬಾಗ್ಚಿ ಮನೆಗೆಲಸದ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ, ಗುಂಪೊಂದು ಬುಧವಾರ ದಂಪತಿಯನ್ನು ನಡುರಸ್ತೆಗೆ ಎಳೆತಂದು ತೀವ್ರ ಹಲ್ಲೆ ನಡೆಸಿತ್ತು.

ಆರೋಪಿ ಪೂರ್ಣಿಮಾ ಅವರನ್ನು ಬುಧವಾರವೇ ಮತ್ತು ಆಕೆಯ ಪತಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೃತಿಕಾ ಚತುರ್ವೇದಿ ಅವರು ಆರೋಪಿ ದಂಪತಿಯನ್ನು ಆಗಸ್ಟ್‌ 2ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ದಂಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಮತ್ತು ಬಾಲಕಾರ್ಮಿಕ ಕಾಯ್ದೆ ಮತ್ತು ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 75ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಲಕಿಗೆ ಕಾದ ಕಬ್ಬಿಣದ ಇಕ್ಕಳದಿಂದ ಬರೆ’

ದಂಪತಿಯು ಬಾಲಕಿಗೆ ಕಾದ ಕಬ್ಬಿಣದ ಇಕ್ಕಳದಿಂದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ಸಂಬಂಧಿಕರು ಆರೋಪಿಸಿದ್ದು, ದಂಪತಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಆರೋಪಿ ದಂಪತಿಯು ತಮ್ಮ ಮಗುವಿನ ಕಾಳಜಿ ಮಾಡಲು ಎರಡು ತಿಂಗಳ ಹಿಂದೆ ಬಾಲಕಿಯನ್ನು ನೇಮಿಸಿಕೊಂಡಿದ್ದರು. ಆದರೆ, ಆಕೆಯಿಂದ ಮನೆಗೆಲಸವನ್ನೂ ಮಾಡಿಸುತ್ತಿದ್ದರು. ಆದರೆ, ಬಾಲಕಿಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಆಕೆಯ ಪೋಷಕರಿಗೆ ತಿಳಿದಿರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

ಬಾಲ್ಕನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯ ಮೇಲೆ ಮಹಿಳೆ ಹಲ್ಲೆ ನಡೆಸುತ್ತಿರುವುದು ಬುಧವಾರ ಬೆಳಿಗ್ಗೆ ಅದೇ ರಸ್ತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಯ ಚಿಕ್ಕಮ್ಮನ ಕಣ್ಣಿಗೆ ಬಿದ್ದಿದೆ. ಆಗ, ಬಾಲಕಿಯ ಚಿಕ್ಕಮ್ಮ ಇತರರೊಂದಿಗೆ ದಂಪತಿಯ ಮನೆಗೆ ಹೋಗಿ, ಬಾಗಿಲು ತಟ್ಟಿದ್ದಾರೆ. ಆದರೆ, ಅವರು ಹೊರ ಬಂದಿರಲಿಲ್ಲ. ಗಲಾಟೆ ಮಾಡಿದ ಬಳಿಕವೇ ಬಾಗಿಲು ತೆರೆದಿದ್ದು, ಬಾಲಕಿ ಹೊರಗೆ ಬಂದು ತನ್ನ ಮೇಲೆ ನಡೆದಿರುವ ದೌರ್ಜನ್ಯ ವಿವರಿಸಿದ್ದಾಳೆ ಎಂದು ಸಂಬಂಧಿಕರು ಹೇಳಿದ್ದಾರೆ.

‘ತಪ್ಪು ಮಾಡಿದರೆ, ಬಿಸಿ ಇಕ್ಕಳ ಅಥವಾ ಕಾದ ಕಬ್ಬಿಣದಿಂದ ಮಹಿಳೆ ಹಲ್ಲೆ ನಡೆಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದೆ. ಆಗಾಗ್ಗೆ ತಿನ್ನಲು ಹಳಸಿದ ಆಹಾರ ಕೊಡುತ್ತಿದ್ದರೆಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ಕೈಗಳಿಗೆ ಅನೇಕ ಕಡೆ ಸುಟ್ಟ ಗಾಯಗಳಾಗಿವೆ. ಆಕೆ ಮಾನಸಿಕವಾಗಿ ಜರ್ಜರಿತವಾಗಿದ್ದಾಳೆ’ ಎಂದು ಬಾಲಕಿಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಆರೋಪಿಸಿದ್ದಾರೆ.

‘ಕೆಲವು ದಿನಗಳ ಹಿಂದೆ ಬಾಲಕಿಯು, ಮಹಿಳೆಯ ಸಮವಸ್ತ್ರವನ್ನು ಇಸ್ತ್ರಿ ಮಾಡುವಾಗ, ತಪ್ಪಾಗಿ ‌ಬಟ್ಟೆಗಳನ್ನು ಸುಟ್ಟು ಹಾಕಿದ್ದಾಳೆ. ತನ್ನ ಸಮವಸ್ತ್ರ ಸುಟ್ಟಿರುವುದನ್ನು ನೋಡಿ ಆ ಮಹಿಳೆ ಅದೇ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿಗೆ ಸುಟ್ಟ ಗಾಯ ಮಾಡಿದ್ದಾಳೆ’ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಪೋಷಕರು ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಗ್ರಾಮವೊಂದರಿಂದ ಬಂದವರಾಗಿದ್ದು, ಕುಟುಂಬ ಸದಸ್ಯರೊಬ್ಬರ ಹಠಾತ್‌ ಸಾವಿನಿಂದಾಗಿ ಗ್ರಾಮಕ್ಕೆ ಹೋಗಿದ್ದರು. ಸುದ್ದಿ ತಿಳಿದ ಮೇಲೆ ದೆಹಲಿಗೆ ವಾಪಸಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.