ADVERTISEMENT

ಅಡ್ಡಪಲ್ಲಕ್ಕಿಯಿಂದ ದರಿದ್ರ ನಿವಾರಣೆ: ಉಜ್ಜಯಿನಿ ಶ್ರೀ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಆಲಮೇಲದ ಅರ್ಜುಣಗಿ ಹಿರೇಮಠದ ಸಂಗನಬಸವ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ನಡೆದ ಧರ್ಮ ಸಭೆಯಲ್ಲಿ ಭಾಗವಹಿಸಿದ್ದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹಾಗೂ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು
ಆಲಮೇಲದ ಅರ್ಜುಣಗಿ ಹಿರೇಮಠದ ಸಂಗನಬಸವ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ನಡೆದ ಧರ್ಮ ಸಭೆಯಲ್ಲಿ ಭಾಗವಹಿಸಿದ್ದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಹಾಗೂ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು   

ಆಲಮೇಲ (ವಿಜಯಪುರ): ‘ಅಡ್ಡಪಲ್ಲಕ್ಕಿ ಉತ್ಸವದಿಂದ ದಾರಿದ್ರ್ಯ (ಅಮಂಗಲ) ನಿವಾರಣೆಯಾಗುತ್ತದೆ. ಸಮಾಜದಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ. ಆದ್ದರಿಂದ ಈ ಆಚರಣೆಯನ್ನು ಟೀಕಿಸುವುದು ಸರಿಯಲ್ಲ. ಇಂಥ ಉತ್ಸವಗಳು ನಿರಂತರವಾಗಿ ನಡೆಯಬೇಕು’ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಅರ್ಜುಣಗಿ ಹಿರೇಮಠದ ಸಂಗನಬಸವ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬುಧವಾರ ತಡರಾತ್ರಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ‘ವೀರಶೈವ ಧರ್ಮ ಅನಾದಿ ಕಾಲದಿಂದಲೂ ಅಸ್ತಿತ್ವತ್ವದಲ್ಲಿದೆ. ಈಚೆಗೆ ಕೆಲವರು ಇದನ್ನು ಅಲ್ಲಗಳೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ‘ಧರ್ಮ ಒಡೆಯಲಿಕ್ಕಾಗಿಯೇ ಕೆಲವು ಕಾವಿಗಳನ್ನು ಖಾದಿಗಳು ಖರೀದಿಸಿದ್ದಾರೆ. ಬಸವಣ್ಣನವರ ಹೆಸರು ಹೇಳಿಕೊಂಡು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಧರ್ಮದಲ್ಲಿ ಹುಳಿ ಹಿಂಡುವ ಕೆಲಸವನ್ನು ಕೆಲ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಸಂಸ್ಕಾರವನ್ನು ತಿರಸ್ಕರಿಸಿ ಬದುಕುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ, ಅಡ್ಡಪಲ್ಲಕ್ಕಿ ನಡೆದರೆ ಇಡೀ ಗ್ರಾಮವೇ ಸಂಸ್ಕಾರ ಪಡೆಯುತ್ತದೆ. ಶೋಭೆಯೂ ನೆಲೆಸುತ್ತದೆ’ ಎಂದು ಹೇಳಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.