ADVERTISEMENT

ಅಧಿಕಾರಿಗಳಿಗೆ ಲಂಚ : ರೆಡ್ಡಿ ಆಪ್ತರ ತಪ್ಪೊಪ್ಪಿಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಲು ಮತ್ತು ಅದಿರನ್ನು ಅಕ್ರಮವಾಗಿ ಬಂದರುಗಳಿಗೆ ಸಾಗಿಸಲು ನೆರವು ನೀಡುತ್ತಿದ್ದ ಸರ್ಕಾರಿ ಅಧಿಕಾರಿಗಳಿಗೆ ನಿರಂತರವಾಗಿ ಲಂಚ ನೀಡುತ್ತಿದ್ದುದು ನಿಜ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಆಪ್ತರಾದ ಖಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಸಿಬಿಐಗೆ ನೀಡಿರುವ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ನಡೆಸುತ್ತಿದ್ದ ಅಕ್ರಮ ಗಣಿಗಾರಿಕೆ ಚಟುವಟಿಕೆಯ ಮೇಲುಸ್ತುವಾರಿಯನ್ನು ಈ ಇಬ್ಬರೂ ವಹಿಸಿದ್ದರು. ಮಹೇಶ್ ಮತ್ತು ನಾಗರಾಜ್ ಅವರನ್ನು ಸಿಬಿಐ ಪೊಲೀಸರು ಕಳೆದ ಮಾರ್ಚ್ ಮೊದಲ ವಾರ ಬಂಧಿಸಿದ್ದರು. ಮಾ. 6ರಂದು ಸಿಬಿಐ ಪೊಲೀಸರಿಗೆ ವಿಸ್ತೃತವಾದ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಇಬ್ಬರೂ, ರಾಜ್ಯದ 16 ಜಿಲ್ಲೆಗಳ ಹಾಗೂ ಆಂಧ್ರಪ್ರದೇಶದ ಕೆಲ ಜಿಲ್ಲೆಗಳ ಅಧಿಕಾರಿಗಳಿಗೆ ಹೇಗೆ ಲಂಚ ನೀಡಲಾಗುತ್ತಿತ್ತು ಎಂಬ ವಿವರವನ್ನು ಬಿಡಿಸಿಟ್ಟಿದ್ದಾರೆ.

ಆದಾಯ ತೆರಿಗೆ ಇಲಾಖೆ ಒದಗಿಸಿದ್ದ `ಪೆನ್‌ಡ್ರೈವ್' ಒಂದರಲ್ಲಿ ಇದ್ದ ಮಾಹಿತಿ ಆಧರಿಸಿ, ಅಕ್ರಮ ಗಣಿಗಾರಿಕೆಗೆ ಸಹಕರಿಸುತ್ತಿದ್ದ 617 ಅಧಿಕಾರಿಗಳಿಗೆ ರೂ. 2.26 ಕೋಟಿ  ಲಂಚ ನೀಡಲಾಗಿತ್ತು ಎಂದು ಲೋಕಾಯುಕ್ತರು ತಮ್ಮ ವರದಿಯಲ್ಲಿ ತಿಳಿಸಿದ್ದರು.

`ಆ ಪೆನ್ ಡ್ರೈವ್ ನನ್ನದೇ. ಆದಾಯ ತೆರಿಗೆ ಅಧಿಕಾರಿಗಳು 2010ರಲ್ಲಿ ನನ್ನಿಂದ ಅದನ್ನು ವಶಪಡಿಸಿಕೊಂಡಿದ್ದರು' ಎಂದು ಮಹೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. `2008ರ ಚುನಾವಣೆಯಲ್ಲಿ ಇಬ್ಬರೂ ವಿಜಯನಗರ (ಹೊಸಪೇಟೆ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪರ ಪ್ರಚಾರ ಮಾಡಿದ್ದೆವು. ಚುನಾವಣೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು.

ನಂತರ ಇಬ್ಬರ ವಿರುದ್ಧವೂ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಅದನ್ನೇ ಬಳಸಿಕೊಂಡು ಅಕ್ರಮ ಗಣಿಗಾರಿಕೆಯ ಬೆಂಬಲಕ್ಕೆ ನಿಲ್ಲುವಂತೆ ರೆಡ್ಡಿ ಮನವೊಲಿಸಿದ್ದರು. ಆನಂದ್ ಸಿಂಗ್ ಈ ವಿಷಯದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು' ಎಂದು ಇಬ್ಬರೂ ತಪ್ಪೊಪ್ಪಿಗೆ ಹೇಳಿಕೆಗಳಲ್ಲಿ ವಿವರಿಸಿದ್ದಾರೆ. ಮಹೇಶ್ ಮತ್ತು ನಾಗರಾಜ್ ಸಿಬಿಐಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳ ವಿವರಗಳು `ಪ್ರಜಾವಾಣಿ'ಗೆ ಲಭ್ಯವಾಗಿವೆ.

ಮಹೇಶ್ ಹೇಳಿರುವುದೇನು?: `ಅಕ್ರಮ ಗಣಿಗಾರಿಕೆಯ ಉಸ್ತುವಾರಿ ವಹಿಸಿಕೊಳ್ಳಲು ನಾವು ಒಪ್ಪಿಕೊಂಡ ಬಳಿಕ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ನನಗೆ ರೂ. 20ಲಕ್ಷ   ನೀಡಿದ್ದರು. ಅದನ್ನು ಮೊದಲ ಬಾರಿಗೆ ಅಧಿಕಾರಿಗಳು, ನೌಕರರಿಗೆ ಲಂಚ ನೀಡಲು ಬಳಸುವಂತೆ ಸೂಚಿಸಿದ್ದರು.

ನಂತರದ ದಿನಗಳಲ್ಲಿ `ಹುಲಿಗೆಮ್ಮ ಟ್ರಾನ್ಸ್‌ಪೋರ್ಟ್ ಕಂಪೆನಿ' ಹೆಸರಿನಲ್ಲಿ ಅದಿರು ಸಾಗಣೆಗೆ ನಕಲಿ ಪರವಾನಗಿ ಪತ್ರಗಳನ್ನು ಮುದ್ರಿಸಲು ನಾಗೇಂದ್ರ ನಿರ್ದೇಶನ ನೀಡಿದ್ದರು. ಅಕ್ರಮವಾಗಿ ತೆಗೆದ ಅದಿರನ್ನು ಖರೀದಿಸುವ ವ್ಯಾಪಾರಿಗಳಿಗೆ ನಕಲಿ ಪರವಾನಗಿಗಳನ್ನು ನೀಡಲಾಗುತ್ತಿತ್ತು. ಪ್ರತಿ ಟನ್‌ಗೆ ರೂ. 200 ಅನ್ನು ಅವರಿಂದ `ರಿಸ್ಕ್ ಹಣ'ವಾಗಿ ಪಡೆಯಲಾಗುತ್ತಿತ್ತು. ಅದರಲ್ಲಿ ಒಂದು ಪಾಲನ್ನು ಅಧಿಕಾರಿಗಳು, ನೌಕರರಿಗೆ ಲಂಚ ನೀಡಲು ಬಳಸಲಾಗುತ್ತಿತ್ತು.

`ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ನೀಡುವವರಿಗೆ ಮೊದಲು ಹಣ ನೀಡಲಾಗುತ್ತಿತ್ತು. ನಂತರ ಅದಿರನ್ನು ಅಕ್ರಮವಾಗಿ ರಾಜ್ಯದ ಬೇಲೆಕೇರಿ ಬಂದರು ಹಾಗೂ ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರಿಗೆ ನಿರಾತಂಕವಾಗಿ ಸಾಗಿಸಲು ಅವಕಾಶ ನೀಡುವುದಕ್ಕಾಗಿ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಹಣ ನೀಡುತ್ತಿದ್ದೆವು. ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳ ಅಧಿಕಾರಿಗಳಿಗೆ ನಿರಂತರವಾಗಿ ಹಣ ನೀಡಲಾಗಿತ್ತು.

`ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯ 9 ಕಡೆಗಳಲ್ಲಿ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು. ಅಲ್ಲಿನ ಅದಿರನ್ನು 15 `ಸ್ಟಾಕ್‌ಯಾರ್ಡ್'ಗಳಿಗೆ ಸಾಗಿಸಿ, ಸಂಗ್ರಹಿಸಲಾಗುತ್ತಿತ್ತು. ಅಲ್ಲಿ ಲಾರಿಗಳಿಗೆ ತುಂಬಿಸಿ, ತೂಕ ಮಾಡಿ ನಕಲಿ ಪರವಾನಗಿಗಳನ್ನು ನೀಡಿ ಕಳುಹಿಸಲಾಗುತ್ತಿತ್ತು. ರೆಡ್ಡಿಯವರ ಆಪ್ತ ಕೆ. ಮೆಹಫೂಜ್ ಅಲಿಖಾನ್ ಮತ್ತು ಕಂಪ್ಲಿ ಶಾಸಕ ಟಿ.ಎಚ್. ಸುರೇಶ್‌ಬಾಬು ಕಳುಹಿಸುತ್ತಿದ್ದ ಜನರು ಅದಿರು ಸಾಗಣೆಗೆ ಅಡ್ಡಿಪಡಿಸುತ್ತಿದ್ದ ಅಧಿಕಾರಿಗಳನ್ನು `ಮ್ಯಾನೇಜ್' ಮಾಡುತ್ತಿದ್ದರು. `ಅಧಿಕಾರಿಗಳು, ನೌಕರರಿಗೆ ಲಂಚ ನೀಡುತ್ತಿದ್ದುದು ಸೇರಿದಂತೆ ನಮ್ಮ ಎಲ್ಲ ವ್ಯವಹಾರಗಳ ಲೆಕ್ಕವನ್ನೂ ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತಿತ್ತು. ಕಂಪ್ಯೂಟರ್‌ನಲ್ಲಿನ ಮಾಹಿತಿಯನ್ನು ಒಂದು `ಪೆನ್‌ಡ್ರೈವ್'ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. 2010ರಲ್ಲಿ ನಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದರು'.

`ಕೊರಿಯರ್‌ನಂತೆ ಬಳಸಿದರು': ಅಧಿಕಾರದ ಬಲ ಬಳಸಿ ಬೆದರಿಸಿ ತಮ್ಮನ್ನು ಅಕ್ರಮ ಗಣಿಗಾರಿಕೆಗೆ ಬಳಸಿಕೊಂಡರು. ನಕಲಿ ಪರವಾನಗಿಗಳನ್ನು ನೀಡಿ ಹಣ ವಸೂಲಿ ಮಾಡುವುದು, ಅಧಿಕಾರಿಗಳು, ನೌಕರರಿಗೆ ಲಂಚ ನೀಡುವುದು, ಅದಿರು ಖರೀದಿದಾರರು ಬೇನಾಮಿ ಕಂಪೆನಿಗಳ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡುತ್ತಿದ್ದ ಹಣವನ್ನು ಬೇನಾಮಿದಾರರ `ಸ್ವಂತ' ಚೆಕ್ ಬಳಸಿ ನಗದೀಕರಿಸುವ ಕೆಲಸವನ್ನು ನಿರ್ವಹಿಸಿರುವುದಾಗಿ ನಾಗರಾಜ್ ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ.

ಕೊರಿಯರ್‌ನಂತೆ ಬಳಕೆ: `ನಮ್ಮನ್ನು ಅವರು (ರೆಡ್ಡಿ ಮತ್ತು ಅವರ ಗುಂಪು) `ಕೊರಿಯರ್'ನಂತೆ ಬಳಸಿದರು. ಬೇನಾಮಿ ಕಂಪೆನಿಗಳ `ಮಾಲೀಕ'ರ ಹಾಗೂ ಕೆಲ ಸಂದರ್ಭಗಳಲ್ಲಿ ಅಲಿಖಾನ್ ಮತ್ತು ಸುರೇಶ್ ಬಾಬು ಅವರ `ಸೆಲ್ಫ್' ಚೆಕ್ ಬಳಸಿ ಹಣ ನಗದೀಕರಿಸಿದ್ದೆವು. ನಂತರ ಅದನ್ನು ನಿಗದಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿಯೂ ನಮ್ಮದೇ ಆಗಿತ್ತು. ನಾಗರಾಜ್ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಲಂಚ ನೀಡಲು ಹೋಗುವಾಗ ನನ್ನನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು' ಎಂದು ಅವರು ಹೇಳಿದ್ದಾರೆ.

ವರದಿ ಅಲ್ಲಗಳೆದಿದ್ದ ಡಿಸಿಪಿ: ಆದಾಯ ತೆರಿಗೆ ಇಲಾಖೆ ನೀಡಿದ್ದ `ಪೆನ್‌ಡ್ರೈವ್'ನಲ್ಲಿದ್ದ ಮಾಹಿತಿ ಆಧರಿಸಿ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರಿಂದ ಲಂಚ ಪಡೆಯುತ್ತಿದ್ದ 617 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಪಟ್ಟಿಯನ್ನು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಐಎಫ್‌ಎಸ್ ಅಧಿಕಾರಿ ಡಾ.ಯು.ವಿ. ಸಿಂಗ್ ತಮ್ಮ ವರದಿಯಲ್ಲಿ ನೀಡಿದ್ದರು.

ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಕೋಲಾರ, ದಾವಣಗೆರೆ, ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಗುಲ್ಬರ್ಗ,ವಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳಿಗೆ ಲಂಚ ನೀಡಲಾಗಿತ್ತು ಎಂಬ ವಿವರ ಅದರಲ್ಲಿ ಇತ್ತು. ಆಂಧ್ರಪ್ರದೇಶದ ಅಧಿಕಾರಿಗಳ ಪಟ್ಟಿಯೂ ಇತ್ತು.

ಈ ಪಟ್ಟಿಯಲ್ಲಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪ ಕುರಿತು ಆಂತರಿಕ ವಿಚಾರಣೆ ನಡೆಸಲು ಗುಪ್ತಚರ ಇಲಾಖೆಯ ಬೆಂಗಳೂರು ನಗರ ಡಿಸಿಪಿ ಹುದ್ದೆಯಲ್ಲಿದ್ದ ವಿ. ಡಿಸೋಜಾ ಅವರನ್ನು ಗೃಹ ಇಲಾಖೆ ನೇಮಿಸಿತ್ತು. ಆದಾಯ ತೆರಿಗೆ ಇಲಾಖೆ ದಾಳಿಯ ಸಮಯದಲ್ಲಿ ದಾಖಲಿಸಿದ್ದ ಸ್ಥಳ ಮಹಜರಿನಲ್ಲಿ `ಪೆನ್‌ಡ್ರೈವ್' ವಿಷಯ ಉಲ್ಲೇಖವಾಗಿರಲಿಲ್ಲ ಎಂಬ ಕಾರಣ ನೀಡಿದ್ದ ಡಿಸೋಜಾ, ಯು.ವಿ. ಸಿಂಗ್ ವರದಿಯನ್ನೇ ಅಲ್ಲಗಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.