ಮನೆಯಂಗಳದಲ್ಲಿ ಮಾತುಕತೆ
ಬೆಂಗಳೂರು: `ಯಕ್ಷಗಾನ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಕಲಾವಿದರಲ್ಲಿ ಅನುಕರಣೆ ಜಾಸ್ತಿಯಾಗುತ್ತಿದೆ. ಅನುಕರಣೆ ಬೇಡ, ಅನುಸರಣೆ ಇರಲಿ. ಕಲಾವಿದರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಕಲಾದೇವಿ ಒಲಿಯುತ್ತಾಳೆ~ ಎಂದು `ಪದ್ಮಶ್ರೀ~ ಪುರಸ್ಕೃತ ಯಕ್ಷಗಾನದ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದಲ್ಲಿ ಯಕ್ಷರಂಗದಲ್ಲಿ ತಾವು ಸಾಗಿ ಬಂದ ದಾರಿ, ರಂಗದಲ್ಲಾಗುತ್ತಿರುವ ಪಲ್ಲಟಗಳು, ಅದಕ್ಕೆ ಪರಿಹಾರೋಪಾಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು.
`ಯುವ ಕಲಾವಿದರು ತಮ್ಮತನ ಅಳವಡಿಸಿಕೊಳ್ಳಬೇಕು. ಯಕ್ಷಗಾನದ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನಾನು ಯಕ್ಷಗಾನದ ಮೂಲ ಸಂಪ್ರದಾಯ ಬಿಡಲಿಲ್ಲ. ಕಲೆಯಲ್ಲಿ ಹಳೆ ಬೇರು ಹಾಗೂ ಹೊಸ ಚಿಗುರು ಇರಬೇಕು. ಕಲೆ ಶಾಶ್ವತ, ಕಲಾವಿದ ಶಾಶ್ವತ ಅಲ್ಲ. ಶ್ರೀಮಂತ ಕಲೆಯನ್ನು ಬೆಳೆಸುವ ಬಗ್ಗೆ ಕಲಾಸಕ್ತರು ಚಿಂತನೆ ಮಾಡಬೇಕು. ಯಕ್ಷಗಾನದಲ್ಲಿ ಮಾತ್ರ ಶುದ್ಧ ಕನ್ನಡ ಉಳಿದಿದೆ. ಅಲ್ಲಿ ಪ್ರತಿ ಶಬ್ದಕ್ಕೂ ಅದ್ಭುತ ಅರ್ಥ ಇದೆ. ಯಕ್ಷಗಾನ ಕಲಾವಿದ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ~ ಎಂದು ಅವರು ತಿಳಿಸಿದರು.
`ಯಕ್ಷಗಾನಕ್ಕೆ ಮೊದಲ ಬಾರಿ ಪದ್ಮಶ್ರೀ ಸಿಕ್ಕಿದೆ. ಈ ವರೆಗೆ ಯಕ್ಷ ಕಲೆಗೆ ಪದ್ಮಶ್ರೀ ಸಿಕ್ಕಿಲ್ಲ ಎಂಬ ನೋವು, ಬೇಸರ ಇತ್ತು. ಈಗ ಅದನ್ನು ಕಲಾದೇವಿ ಪರಿಹಾರ ಮಾಡಿದ್ದಾಳೆ. ಯಕ್ಷಗಾನ ದಿಲ್ಲಿಗೆ ಹೋಯಿತು. ಅಲ್ಲಿಯವರ ಅಂತರಂಗ ಮುಟ್ಟಿತು, ತಂತಿ ಮೀಟಿತು. ಕಲೆಗೆ ಬೆಲೆ ಸಿಕ್ಕಿತು. ಯಕ್ಷಗಾನ ಕಲಾವಿದರು ಮುಂದಿನ ದಿನಗಳಲ್ಲಿ ಪದ್ಮಭೂಷಣ, ಭಾರತರತ್ನ ಪಡೆಯುವಂತಾಗಬೇಕು~ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಹೊಸ ಪ್ರಸಂಗ ಭರಾಟೆ: `ಹೊಸ ಪ್ರಸಂಗಗಳ ಭರಾಟೆಯಿಂದ ಕಲಾವಿದರ ಅಭಿವೃದ್ಧಿ ಕುಂಠಿತವಾಗಿದೆ. ಪೌರಾಣಿಕ ಹಿನ್ನೆಲೆ ಇದ್ದರೆ ಕಲಾವಿದರೂ ಉತ್ಸಾಹದಿಂದ ಪಾತ್ರ ಮಾಡಲು ಸಾಧ್ಯವಾಗುತ್ತದೆ. ಹೊಸ ಪ್ರಸಂಗಗಳು ಯಕ್ಷಗಾನದಲ್ಲಿ ಅನಿವಾರ್ಯ ಎಂಬಂತಾಗಿದೆ. ಮೇಳದ ಯಜಮಾನರ ಇಷ್ಟಕ್ಕೆ ತಕ್ಕಂತೆ ಕಲಾವಿದರು ವೇಷ ಮಾಡಬೇಕಾಗುತ್ತದೆ. ಆದರೆ ಯಕ್ಷಗಾನ ವಿಜ್ರಂಭಿಸಲು ಪೌರಾಣಿಕ ಪ್ರಸಂಗಗಳೇ ಬೇಕು~ ಎಂದು ಅವರು ಪ್ರತಿಪಾದಿಸಿದರು.
ದೇಹ ಕೇಳುತ್ತಿಲ್ಲ: `ಕಲಾಜೀವನದ ಆರಂಭದಲ್ಲಿ ನನ್ನನ್ನು ಮಾತನಾಡಿಸುವವರು ಇರಲಿಲ್ಲ. ನಾನು ಕಲಿತದ್ದು ಎರಡನೇ ತರಗತಿ ವರೆಗೆ ಮಾತ್ರ. ಯಕ್ಷಗಾನ ನೋಡಿದ್ದೇನೆ, ಕಲೆಯಿಂದ ಕಲಿತಿದ್ದೇನೆ, ಅನುಭವಿಸಿದ್ದೇನೆ. ಅನುಭವದ ಪಾಠದಿಂದ ಈಗ ದೊಡ್ಡ ಕಲಾವಿದ ಆಗಿದ್ದೇನೆ. ನನಗೆ ಕಲಾದೇವತೆ ಒಲಿದು ಬಂದಳು.
ಕಲಾವಿದನಾಗಿ ಸಿಹಿಯಷ್ಟೇ ಕಹಿ ಅನುಭವಿಸಿದ್ದೇನೆ. ಒಂದು ಕಾಲದಲ್ಲಿ ಸ್ವಂತ ಮನೆ ಇರಲಿಲ್ಲ. ಅಮೃತೇಶ್ವರ ಮೇಳದ ಯಜಮಾನ ಶ್ರೀಧರ ಹಂದೆಯವರು ರೂ 25 ಸಾವಿರ ಕೊಟ್ಟರು. ಜಮೀನು ತೆಗೆದುಕೊಂಡೆ. ಮನೆ ಕಟ್ಟಿದೆ. ಈಗ ನಿಶ್ಚಿಂತೆ ಇದೆ. ಈ ಚಿಟ್ಟಾಣಿ ಬೆಳೆದುದು, ಬೆಳಗಿದ್ದು ಅಭಿಮಾನಿಗಳ ಆಶೀರ್ವಾದದಿಂದ. ಈಗಲೂ ವೇಷ ಕಟ್ಟಿ ಕುಣಿಯುವ ಮನಸ್ಸು ಇದೆ, ಆದರೆ ದೇಹ ಕೇಳುತ್ತಿಲ್ಲ. ದೇಹದಲ್ಲಿ ಶಕ್ತಿ ಇರುವ ವರೆಗೆ ವೇಷ ಹಾಕುತ್ತೇನೆ~ ಎಂದು 78ರ ಹರೆಯದ ಚಿಟ್ಟಾಣಿ ನುಡಿದರು.
ಗುರುಗಳ ಕೊರತೆ: `ಈ ಹಿಂದೆ ಯಕ್ಷಗಾನಕ್ಕೆ ರಾಜಾಶ್ರಯ ಇತ್ತು. ಈಗ ದೇವತಾ ಆಶ್ರಯ ಇದೆ. ಕುಂದಾಪುರ ತಾಲ್ಲೂಕಿನಲ್ಲೇ 18 ಯಕ್ಷಗಾನ ಮೇಳಗಳು ಇವೆ. ಬಯಲಾಟ ಮೇಳಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಕ್ಷಗಾನ ಕಲಾವಿದರ ಸಂಖ್ಯೆಯೂ ಕಡಿಮೆ ಆಗಿಲ್ಲ. ಆದರೆ ಕಲಿಸುವವರ (ಗುರುಗಳು) ಸಂಖ್ಯೆ ಕಡಿಮೆ ಆಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.
`ಯಕ್ಷಗಾನದಲ್ಲಿ ತೆಂಕುತಿಟ್ಟಿನ ಮೇರು ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳ ಭಸ್ಮಾಸುರನಿಗೆ ಸಾಟಿ ಇಲ್ಲ. ಆ ವೇಷಕ್ಕೆ ಹೊಸ ರೂಪು ನೀಡಿದವರು ಅವರೇ. ಆಗ ಬಡಗುತಿಟ್ಟಿನಲ್ಲಿ ಭಸ್ಮಾಸುರ ವೇಷ ಯಾರೂ ಹಾಕುತ್ತಿರಲಿಲ್ಲ. ನಾನು ವೇಷ ಮಾಡುವ ಮೊದಲು ಐದು ಬಾರಿ ಕುರಿಯ ಶಾಸ್ತ್ರಿಗಳ ಭಸ್ಮಾಸುರ ವೇಷ ನೋಡಿದ್ದೇನೆ. ದಕ್ಷಿಣ ಕನ್ನಡದ ಕನ್ಯಾನದಲ್ಲಿ ಆಟಕ್ಕೆ ಹೋದಾಗ ಹರಸಿದರು. ತೆಂಕುತಿಟ್ಟಿನಲ್ಲಿ ಅಂತಹ ಮೇರು ಕಲಾವಿದ ಬೇರೆ ಇಲ್ಲ. ಅಂತವರ ಆಶೀರ್ವಾದ ಪಡೆದಿದ್ದೇನೆ~ ಎಂದು ಚಿಟ್ಟಾಣಿ ರಾಮಚಂದ್ರ ಹೆಗಡೆ ಹೇಳಿದರು.
ಎಂಟರ ಹರೆಯದಲ್ಲೇ ಯಕ್ಷಗಾನದ ಗೀಳು |
`ಎಂಟರ ಹರೆಯದಲ್ಲೇ ಯಕ್ಷಗಾನದ ಗೀಳು ಅಂಟಿಕೊಂಡಿತು. ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ ಅವರ ವೇಷ ಕಂಡು ಯಕ್ಷಗಾನದಲ್ಲಿ ಆಸಕ್ತಿ ಉಂಟಾಯಿತು. ಮನೆಯಲ್ಲಿ ಒಂದು ಹೊತ್ತಿನ ತುತ್ತಿಗೂ ಕಷ್ಟ ಎಂಬಂತಹ ಸ್ಥಿತಿ. ಯಕ್ಷ ಗೀಳು ಕಂಡು ಮನೆಯಲ್ಲಿ ಹೊಡೆಯುತ್ತಿದ್ದರು. ಅಂತಹ ಸಂಕಟ ಕಾಲದಲ್ಲಿ ಬೆಳೆದ ಜೀವವಿದು. ಶಾಲೆಗೆ ಹೋಗದೆ ಗುಡ್ಡದಲ್ಲಿ ಗೇರು ಮರದಡಿಯಲ್ಲಿ ಒಬ್ಬನೇ ಕುಣಿದು ಅಭ್ಯಾಸ ಮಾಡಿದೆ. 14ನೇ ವರ್ಷದಲ್ಲಿ ಪಾರಿಜಾತ ಪ್ರಸಂಗದಲ್ಲಿ `ಅಗ್ನಿ~ಯಾಗಿ ಬಣ್ಣ ಹಚ್ಚಿದೆ~ ಎಂದು ಚಿಟ್ಟಾಣಿ ರಾಮಚಂದ್ರ ಹೆಗಡೆ ನೆನಪಿಸಿಕೊಂಡರು. `ಯಕ್ಷಗಾನ ಆಸಕ್ತಿ ಕಂಡು ಚಿಕ್ಕಪ್ಪ ಬಾಳೆಗದ್ದೆ ಮೇಳಕ್ಕೆ ಸೇರಿಸಿದರು. ಈ ನಡುವೆ ಯಕ್ಷ ಹಾದಿಯಲ್ಲಿ ಕಲ್ಲಿತ್ತು, ಮುಳ್ಳಿತ್ತು. ಕಾಳಿದಾಸ ಪ್ರಸಂಗದ `ಕಲಾಧರ~ ಪಾತ್ರ ವೃತ್ತಿ ಜೀವನಕ್ಕೆ ತಿರುವು ನೀಡಿತು. ಹಿರಿಯ ಕಲಾವಿದರೊಬ್ಬರ ವಿರೋಧದ ನಡುವೆಯೂ ಕಡತೋಕ ಮಂಜುನಾಥ ಭಾಗವತರು ಹಠ ಹಿಡಿದು ನನ್ನಿಂದ ಈ ವೇಷ ಮಾಡಿಸಿದರು. ಇಡಗುಂಜಿ ಮೇಳದ ಕೆರೆಮನೆ ಶಿವರಾಮ ಹೆಗಡೆಯವರು ನನ್ನಿಂದ ಗದಾಯುದ್ಧದ ಕೌರವ ಮಾಡಿಸಿದರು. ಬಳಿಕ ಎಲ್ಲಾ ಪಾತ್ರಗಳನ್ನು ಮಾಡಲು ಆರಂಭಿಸಿದೆ. ಈ ನಡುವೆ ನನ್ನನ್ನು ಕಂಡು ಹೊಟ್ಟೆ ಕಿಚ್ಚು ಪಟ್ಟವರು ಇದ್ದಾರೆ. ಅದನ್ನೆಲ್ಲ ಮೀರಿ ಬೆಳೆದೆ~ ಎಂದು ಅವರು ನೆನಪಿನಾಳಕ್ಕೆ ಜಾರಿದರು. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.