ADVERTISEMENT

ಅಪೌಷ್ಟಿಕತೆ ಸಮಸ್ಯೆ ನೀಗಿಸಲು ವಿಫಲ: ಹೈಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: `ಬಿಸಿಯೂಟದ ಹೆಸರಿನಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿ ಬೇಳೆಬಾತನ್ನು ನಿಮ್ಮ ಅಧಿಕಾರಿಗಳು ಒಮ್ಮೆಯಾದರೂ ತಿಂದ್ದ್ದಿದಾರೆಯೇ, ತಿನ್ನದಿದ್ದರೆ ಅವರನ್ನು ಇಲ್ಲಿಗೆ ಕರೆಸಿ. ನಾವು ತಿನ್ನಿಸುತ್ತೇವೆ~ ಎಂದು ಸರ್ಕಾರವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

`ಮಕ್ಕಳ ಪೋಷಣೆ ಮಾಡಲು ಸರ್ಕಾರಕ್ಕೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ನಿಮ್ಮಿಂದ  ಮಕ್ಕಳ ಜವಾಬ್ದಾರಿಯ ಹೊಣೆ ಹೊರಲು ಸಾಧ್ಯವಾಗದಿದ್ದರೆ ತಿಳಿಸಿ. ಇದನ್ನು ಬೇರೆಯವರಿಗೆ ವಹಿಸಿ ಕೊಡುತ್ತೇವೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಕಿಡಿಕಾರಿತು.

ಬಿಸಿ ಬೇಳೆಬಾತ್ ತಯಾರು ಮಾಡುವಾಗ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಬಳಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಕೆಟ್ಟ ವಾಸನೆ ಬರುತ್ತಿದೆ ಎಂದು ವಕೀಲರು ನ್ಯಾಯಮೂರ್ತಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ, ಪೀಠ ಮೌಖಿಕವಾಗಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿತು.

ರಾಜ್ಯದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ರಾಯಚೂರಿನಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವ ಕುರಿತಾಗಿ ಮಾಧ್ಯಮಗಳಲ್ಲಿ ಬಂದ ವರದಿ ಆಧಾರದ ಮೇಲೆ ನ್ಯಾಯಾಲಯವೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ನಡೆಸುತ್ತಿರುವ ವಿಚಾರಣೆ ಇದಾಗಿದೆ.

`ಕಳೆದ ಸೆಪ್ಟೆಂಬರ್‌ನಲ್ಲಿ ರಾಯಚೂರು ಜಿಲ್ಲೆಯಲ್ಲಿ 93 ಮಂದಿ ಮೃತರಾಗಿದ್ದಾರೆ. ಬೆಂಗಳೂರಿನ ಕೊಳೆಗೇರಿಗಳಲ್ಲಿನ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಕ್ಕಳು ಹಸಿವಿನಿಂದ ಕಂಗಾಲಾಗಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ~ ಎಂದು ವಕೀಲರು ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮನಸ್ಸು ಹೇಗೆ ಬರುತ್ತದೆ?:  `ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಹಸಿವಿನಿಂದ ಬಳಲುತ್ತಿರುವಾಗ, ಗರ್ಭದಲ್ಲಿ ಇರುವ ಮಗುವಿಗೆ ಆಹಾರವೇ ಇಲ್ಲದಾಗ ಹೊಟ್ಟೆ ತುಂಬ ಊಟ ಮಾಡುವ ಮನಸ್ಸು ನಿಮ್ಮ ಸರ್ಕಾರಿ ಅಧಿಕಾರಿಗಳಿಗೆ ಹೇಗೆ ಬರುತ್ತದೆ, ಮಕ್ಕಳು ಉಪವಾಸದಿಂದ ಇರುವಾಗ ನಾವು ಹೊಟ್ಟೆ ತುಂಬ ಊಟ ಮಾಡುವುದು ಎಂದರೆ ಏನರ್ಥ, ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ~ ಎಂದು ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

`ಇದು ಅತ್ಯಂತ ಗಂಭೀರ ಪ್ರಕರಣ. ಬೇರೆ ಕೆಲಸ ಬಿಟ್ಟು ಮೊದಲು ಈ ಬಗ್ಗೆ ಗಮನಹರಿಸುವುದು ನಿಮ್ಮ ಕರ್ತವ್ಯ. ಸಮಸ್ಯೆ ಹೋಗಲಾಡಿಸಲು ಮುಂದೆ ಬನ್ನಿ. ಉಳಿದ ಕೆಲಸಗಳನ್ನು ನಂತರದಲ್ಲಿ ಮಾಡಿ~ ಎಂದು ನ್ಯಾಯಮೂರ್ತಿಗಳು ಸರ್ಕಾರಕ್ಕೆ ತಿಳಿಸಿದರು.

ಸರ್ಕಾರದ ವಾದ: ಸಮಸ್ಯೆ ಬಗೆಹರಿಸಲು ಒಂದೇ ದಿನದಲ್ಲಿ ಸಮಿತಿ ರಚನೆ ಮಾಡುವುದಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಪೀಠಕ್ಕೆ ತಿಳಿಸಿದರು. ಈ ಸಮಿತಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನೂ ಸೇರಿಸಿಕೊಳ್ಳುವುದಾಗಿ ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ವಿಚಾರಣೆಯನ್ನು 29ಕ್ಕೆ ಮುಂದೂಡಿದ ಪೀಠ, ಅಂದು ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.