ADVERTISEMENT

ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ ನಿರ್ಲಕ್ಷ್ಯ ಕಾರಣ: ಎನ್‌ಟಿಸಿಎ ವರದಿ

ನಾಗರಹೊಳೆ ಅಭಯಾರಣ್ಯದಲ್ಲಿ ಜ.17ರಂದು ಹುಲಿ ಮೃತಪಟ್ಟಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 20:20 IST
Last Updated 14 ಜೂನ್ 2017, 20:20 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯದ ಗುಂಡತ್ತೂರು ಮಾಳದ ಹಾಡಿಯಲ್ಲಿ ಸಾವನ್ನಪ್ಪಿದ್ದ ಹುಲಿ (ಸಂಗ್ರಹ ಚಿತ್ರ)
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯದ ಗುಂಡತ್ತೂರು ಮಾಳದ ಹಾಡಿಯಲ್ಲಿ ಸಾವನ್ನಪ್ಪಿದ್ದ ಹುಲಿ (ಸಂಗ್ರಹ ಚಿತ್ರ)   

ಬೆಂಗಳೂರು: ‘ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಹುಲಿ ಸಾಯುವುದಕ್ಕೆ ವಲಯ ಅರಣ್ಯಾಧಿಕಾರಿ ಹಾಗೂ ಪಶುವೈದ್ಯಾಧಿಕಾರಿಯ ನಿರ್ಲಕ್ಷ್ಯವೇ ಕಾರಣ’ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ವರದಿ ತಿಳಿಸಿದೆ.

2017ರ ಜನವರಿ 17ರಂದು ನಡೆದ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ 11 ವರ್ಷದ ಹೆಣ್ಣು ಹುಲಿ ಮೃತಪಟ್ಟಿತ್ತು. ಈ ಪ್ರಕರಣದ ಬಗ್ಗೆ ಪ್ರಾಧಿಕಾರ ತನಿಖೆ ನಡೆಸಿತ್ತು.

‘ಈ ಅಧಿಕಾರಿಗಳು ಕಾರ್ಯಾಚರಣೆಗೆ ಸಾಮಾನ್ಯ ನಿಯಮಾವಳಿಗಳನ್ನು (ಎಸ್‌ಒಪಿ) ಪಾಲಿಸಿಲ್ಲ. ಹಿರಿಯ ಅಧಿಕಾರಿಗಳ  ಅನುಮತಿ ಹಾಗೂ ಮಾರ್ಗದರ್ಶನ ಪಡೆದಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಈ ಹುಲಿ ನಾಗರಹೊಳೆ ಅಭಯಾರಣ್ಯದ ಹೃದಯ ಭಾಗದ ಆಸುಪಾಸಿನಲ್ಲೇ ಇತ್ತು. ಅದನ್ನು ಹೃದಯಭಾಗಕ್ಕೆ ತಲುಪಿಸುವ ಪ್ರಯತ್ನವನ್ನೂ ಅಧಿಕಾರಿಗಳು ನಡೆಸಿಲ್ಲ’ ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ.

‘ಪ್ರಾಣಿಯ ಆರೋಗ್ಯ ಸ್ಥಿತಿ, ಉದ್ವೇಗದ ಪ್ರಮಾಣ, ಮಾನಸಿಕ ಸ್ಥಿತಿ, ಲಿಂಗ, ತಾಪಮಾನ ಗಮನಿಸಿ ಅರಿವಳಿಕೆ ನೀಡಬೇಕಿತ್ತು. ಆದರೆ, ಈ ಪ್ರಕರಣದಲ್ಲಿ  ಪಶು ವೈದ್ಯರು ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ’ ಎಂದು ವರದಿ ತಿಳಿಸಿದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಶಿಫಾರಸು ಮಾಡಿದೆ.

ಅಧಿಕಾರಿ ಸಮಜಾಯಿಷಿ: ಈ ಪ್ರಕರಣದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪಶು ವೈದ್ಯಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಿದೆ ಎಂಬ ವರದಿಗಳನ್ನು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗರಾವ್ ತಳ್ಳಿ ಹಾಕಿದ್ದಾರೆ.

‘ಇಂತಹ ಯಾವುದೇ ವರದಿಗಳು ಬಂದಿಲ್ಲ. ಹುಲಿ ದೇಹದ ವಿವಿಧ ಭಾಗಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಬರಬೇಕಿವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
***
ಏನಿದು ಪ್ರಕರಣ?

ಗುಂಡತ್ತೂರು ಮಾಳದ ಹಾಡಿಯಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯುವ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿತ್ತು. ಇದಕ್ಕೆ ಅತಿಯಾದ ಅರಿವಳಿಕೆ ಚುಚ್ಚುಮದ್ದು ನೀಡಿದ್ದೇ ಕಾರಣ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.