ADVERTISEMENT

ಅರಣ್ಯ ಸಚಿವರ ಅರಣ್ಯ ರೋದನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಬೆಂಗಳೂರು: `ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗಿದೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಇದು ಹೇಗೆ?~

`ರಾಜ್ಯದಲ್ಲಿ ಗಿಡ ನೆಡುವ ಕುರಿತೇ ಹತ್ತಾರು ಯೋಜನೆಗಳಿವೆ. ಈ ಯೋಜನೆಗಳ ಭಾಗವಾಗಿ ನೆಟ್ಟ ಗಿಡಗಳೆಲ್ಲ ಮರವಾಗಿ ಬೆಳೆದಿದ್ದರೆ, ಈ ವೇಳೆಗೆ ರಾಜ್ಯದ ಒಟ್ಟು ಭೂಪ್ರದೇಶದ ಶೇಕಡ 70ರಷ್ಟು ಹಸಿರು ಹೊದಿಕೆ ಇರಬೇಕಿತ್ತಲ್ಲವೇ?~

`ಇಲಾಖೆಯ ಕಾನೂನುಗಳು ನಿಷ್ಕೃಿಯವಾಗಿರುವ ಕಾರಣ, ಜನರಿಗೆ ಈ ಕುರಿತು ಭಯವೇ ಇಲ್ಲದಂತಾಗಿದೆ. ಇದನ್ನೆಲ್ಲ ಭಾಷಣ ಸಲುವಾಗಿ ಹೇಳುತ್ತಿಲ್ಲ. ಇಲಾಖೆಯಲ್ಲಿನ ಅವ್ಯವಸ್ಥೆ ನೋಡಿ ಹೇಳುತ್ತಿದ್ದೇನೆ~.

ಇದು, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಮಂಗಳವಾರ ಇಲ್ಲಿ ಆರಂಭವಾದ ಅಧಿಕಾರಿಗಳ ಎರಡು ದಿನಗಳ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಿದ ಮಾತು. ಇಷ್ಟೇ ಅಲ್ಲ, `ಮಾಧ್ಯಮ ಪ್ರತಿನಿಧಿಗಳು ಇರದಿದ್ದರೆ, ಇನ್ನೂ ಹೆಚ್ಚಿನ ಸೂಕ್ಷ್ಮ ಸಂಗತಿಗಳನ್ನು ಹೇಳುತ್ತಿದ್ದೆ~ ಎಂದರು!

ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವುದೇ ಕಿರು ವಿದ್ಯುತ್ ಯೋಜನೆಗೆ ಅನುಮತಿ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರವನ್ನು ವಿಭಾಗ ಅರಣ್ಯ ಅಧಿಕಾರಿ (ಡಿಎಫ್‌ಒ) ನೀಡುವ ವ್ಯವಸ್ಥೆ ಬದಲು, ಹಿರಿಯ ಅಧಿಕಾರಿಗಳ ತಂಡ ಈ ಕೆಲಸ ಮಾಡಬೇಕು ಎಂದರು.

ಸಚಿವರ ಮಾತಿಗೆ ತಿರುಗೇಟು ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ವರ್ಮ, `ಇಲಾಖೆ ಸಿಬ್ಬಂದಿ ಕೆಲಸಕ್ಕೆ ಅಗತ್ಯ ಬೆಂಬಲ ಇಲ್ಲ. ಪ್ರಮುಖ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲ~ ಎಂದರು.

ಎಲ್ಲದಕ್ಕೂ ಅಧಿಕಾರಿಗಳನ್ನು ಹೊಣೆ ಮಾಡುವ ಬದಲು, ಅವರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕು. ಅರಣ್ಯ ಅಧಿಕಾರಿಗಳ ಮಾತಿಗಿಂತ ಸರ್ಕಾರೇತರ ಸಂಘಟನೆಗಳು, ವಿಜ್ಞಾನಿಗಳ ಮಾತಿಗೇ ಹೆಚ್ಚಿನ ಬೆಲೆ ಇದೆ. ಸರ್ಕಾರ ಇಂಥವರ ಮಾತುಗಳಿಗೆ ಮಣಿಯಬಾರದು ಎಂದು ಮನವಿ ಮಾಡಿದರು.

ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ತಡೆಯುವಲ್ಲಿ ಇಲಾಖೆಗೂ ಮಿತಿ ಇದೆ. ಇದು ಆನೆ ಕಾರಿಡಾರ್‌ಗಳನ್ನು ನಾಶಮಾಡುವ ಮೂಲಕ ಸಮಾಜವೇ ತಂದುಕೊಂಡ ಸಮಸ್ಯೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಕೆ. ಸಿಂಗ್ ಅಭಿಪ್ರಾಯಪಟ್ಟರು.

ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ರಾಜ್ಯದ ವಿವಿಧ ವಿಭಾಗಗಳ ಅರಣ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
 
`ಬಾಯಿದ್ದರೂ ಮಾತನಾಡಲು ಆಗದ ಸ್ಥಿತಿ~

`ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ಬಾಯಿದ್ದರೂ ಮಾತನಾಡಲಾಗದ ಸ್ಥಿತಿ ಇದೆ. ರಾಜ್ಯದಲ್ಲಿ ನಾಶವಾಗಿರುವ ಪರಿಸರದ ಮರುಸ್ಥಾಪನೆಯ ನಂತರವೇ ಗಣಿಗಾರಿಕೆಗೆ ಅವಕಾಶ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ಕುರಿತು ನಾವು ಏನೂ ಮಾತನಾಡುತ್ತಿಲ್ಲ. ಇಲಾಖೆ ಎಲ್ಲಿ ಎಡವುತ್ತಿದೆ ಎಂಬ ಕುರಿತು ಪ್ರತಿ ಅರಣ್ಯ ವಲಯ ಮಟ್ಟದಲ್ಲಿ ಚರ್ಚೆ ನಡೆಯಬೇಕು~ ಎಂದು ಯೋಗೇಶ್ವರ್ ಹೇಳಿದರು. ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನಾಶವಾಗಿರುವ ಪರಿಸರ ಮೊದಲಿನ ಸ್ಥಿತಿಗೆ ಬಂದ ನಂತರವಷ್ಟೇ ಗಣಿಗಾರಿಕೆಗೆ ಹೊಸ ಅನುಮತಿ ಕುರಿತು ಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಹೇಳಿರುವುದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.