ADVERTISEMENT

ಅರಣ್ಯ ಸೂಕ್ಷ್ಮ ವಲಯದಲ್ಲಿ ದೇಗುಲ ನಿರ್ಮಾಣ

ಅರಣ್ಯ ಇಲಾಖೆ ನೋಟಿಸ್‌ ಕೂಡ ಲೆಕ್ಕಿಸದೆ ಕಾಮಗಾರಿ

ಅಮಿತ್ ಎಂ.ಎಸ್.
Published 15 ಅಕ್ಟೋಬರ್ 2017, 19:53 IST
Last Updated 15 ಅಕ್ಟೋಬರ್ 2017, 19:53 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ದೇವಸ್ಥಾನ
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ದೇವಸ್ಥಾನ   

ಚಾಮರಾಜನಗರ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಸಮೀಪದ ಪರಿಸರ ಸೂಕ್ಷ್ಮ ವಲಯದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಕ್ರಮವಾಗಿ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವನ್ಯಜೀವಿ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಗುಂಡ್ಲುಪೇಟೆಯಿಂದ ಬಂಡಿಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಮೇಲುಕಾಮನಹಳ್ಳಿ ಸಮೀಪ ಈಗಾಗಲೇ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಅದರ ಸಮೀಪದಲ್ಲಿಯೇ ಬಲಭಾಗದಲ್ಲಿ ಈಶ್ವರ ಮತ್ತು ಲಕ್ಷ್ಮೀನರಸಿಂಹ ಸ್ವಾಮಿಯ ಗುಡಿಗಳನ್ನು ನಿರ್ಮಿಸಲಾಗುತ್ತಿದೆ. ಇದು ಅರಣ್ಯ ಸಂರಕ್ಷಣೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ವನ್ಯಪ್ರಿಯರು ಆರೋಪಿಸಿದ್ದಾರೆ.

ಇದು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರದಿದ್ದರೂ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಟ್ಟಿದೆ. ಹೀಗಾಗಿ ಇಲ್ಲಿ ಯಾವುದೇ ಬಗೆಯ ನಿರ್ಮಾಣ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಇಲಾಖೆಯ ಕಾನೂನುಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾಮಗಾರಿ ನಡೆಸಲಾಗುತ್ತಿದೆ.

ADVERTISEMENT

ಲಕ್ಷ್ಮೀನರಸಿಂಹ ದೇವಸ್ಥಾನದ ಗರ್ಭಗುಡಿ ನಿರ್ಮಾಣವಾಗಿದ್ದು, ಅದರ ಸುತ್ತಲೂ ಪಡಸಾಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದರ ಪಕ್ಕದಲ್ಲಿ ಚಿಕ್ಕದಾದ ಈಶ್ವರನ ಗುಡಿ ನಿರ್ಮಿಸಲಾಗಿದೆ.

ನೋಟಿಸ್‌ಗೂ ಮನ್ನಣೆ ಇಲ್ಲ
‘ದೇವಸ್ಥಾನ ನಿರ್ಮಿಸುತ್ತಿರುವವರು ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ತಕ್ಷಣದಿಂದಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಕಾಮಗಾರಿಯೂ ಸ್ಥಗಿತಗೊಂಡಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಬುಧವಾರ ಪ್ರಜಾವಾಣಿ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಪಿಲ್ಲರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಂಡುಬಂತು.

ಐತಿಹಾಸಿಕ ಹಿನ್ನೆಲೆ ಇಲ್ಲದ ಈ ಪ್ರದೇಶದಲ್ಲಿ ಹೊಸತಾಗಿ ಈ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಭಕ್ತರೂ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

ಆಂಜನೇಯಸ್ವಾಮಿ ದೇವಸ್ಥಾನದ ಪೂಜೆ ಮಾಡುವ ಮನೆತನದವರೇ ಈ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದಾರೆ ಎನ್ನಲಾಗಿದೆ.

ಜಾಗದ ಗೊಂದಲ
ದೇವಸ್ಥಾನದ ಹಿಂಭಾಗದಲ್ಲಿಯೇ ಆನೆ ತಡೆ ಕಂದಕ (ಇಪಿಟಿ) ಇದ್ದು, ಅಲ್ಲಿಯವರೆಗೆ ಹುಲಿ ರಕ್ಷಿತಾರಣ್ಯ ವ್ಯಾಪಿಸಿದೆ.

‘ದೇವಸ್ಥಾನ ನಿರ್ಮಿಸುತ್ತಿರುವ ಪ್ರದೇಶದ ಸರ್ವೆ ನಂ. 66, 67 ಮತ್ತು 68 ಗ್ರಾಮಠಾಣಾಕ್ಕೆ ಸೇರುತ್ತದೆಯೇ ಅಥವಾ ಸರ್ಕಾರಿ ಭೂಮಿಯೇ ಎಂಬುದರ ಬಗ್ಗೆ ಗೊಂದಲವಿದೆ. ಇದರ ಬಗ್ಗೆ ಸ್ಪಷ್ಟ ದಾಖಲಾತಿಗಳಿಲ್ಲ. ಹೀಗಾಗಿ, ನಾವೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದರು.

ಕಾಡಿನೊಳಗೂ ದೇವಸ್ಥಾನ:
ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಡುವ ಕುಂದಕೆರೆ ವಲಯದ ಕೆಬ್ಬೆಪುರ ಗ್ರಾಮದ ಕಂದಾಯ ಭೂಮಿಯಲ್ಲಿ ಹುಲಿಯಮ್ಮ ದೇವಸ್ಥಾನವನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು.

ಸುಮಾರು 5 ತಿಂಗಳ ಹಿಂದೆ ದೇವಸ್ಥಾನ ಆರಂಭವಾಗಿದ್ದು, ಅರಣ್ಯ ಅಧಿಕಾರಿಗಳು ಕಾಮಗಾರಿಯನ್ನು ತಡೆದಿರಲಿಲ್ಲ. ಈಗ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇದರಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎಂದು ಕಾರ್ಯಕರ್ತರು ದೂರಿದ್ದಾರೆ.
*
ಪರಿಸರ ಸೂಕ್ಷ್ಮ ವಲಯದಲ್ಲಿ ಕಾಮಗಾರಿ ನಡೆಸಲು ವನ್ಯಜೀವಿ ಮಂಡಳಿಯಿಂದ ಅನುಮತಿ ಕಡ್ಡಾಯ. ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿದ್ದು, ಕಾಮಗಾರಿ ನಿಂತಿದೆ.
ಅಂಬಾಡಿ ಮಾಧವ್‌ 
ಬಂಡಿಪುರ ಹುಲಿ ಯೋಜನೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.