ADVERTISEMENT

ಅಲ್ಪಸಂಖ್ಯಾತ ಕಾಲೇಜುಗಳಿಗೆ ಸಿಇಟಿ ಆಯ್ಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:54 IST
Last Updated 16 ಡಿಸೆಂಬರ್ 2013, 19:54 IST

ಬೆಂಗಳೂರು: ಅಲ್ಪಸಂಖ್ಯಾತ ಖಾಸಗಿ ವೃತ್ತಿಪರ ಕಾಲೇಜುಗಳಿಗೆ ಪ್ರತ್ಯೇಕವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಇಲ್ಲ. ಸರ್ಕಾರ ಅಥವಾ ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಈ ಕಾಲೇಜುಗಳು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಪ್ರವೇಶ ಮೇಲ್ವಿಚಾರಣಾ ಸಮಿತಿ ಮತ್ತು ಶುಲ್ಕ ನಿಗದಿ ಸಮಿತಿ ಅಧ್ಯಕ್ಷರು, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಗಳೊಂದಿಗೆ  ಸೋಮವಾರ ನಡೆಸಿದ ಸಭೆಯಲ್ಲಿ  ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ.

ಪ್ರವೇಶ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ವಿ. ಜಗನ್ನಾಥನ್‌ ಸಭೆಯಲ್ಲಿ  ಈ ವಿಷಯ ತಿಳಿಸಿದರು.

ಅಲ್ಪಸಂಖ್ಯಾತ ಸಂಸ್ಥೆ ಅಥವಾ ಡೀಮ್ಡ್‌ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ಇಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಅಥವಾ ಕಾಮೆಡ್‌–ಕೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಅಲ್ಪಸಂಖ್ಯಾತ ಸಂಸ್ಥೆಗಳ ಕೋರಿಕೆಯನ್ನು ತಳ್ಳಿ ಹಾಕಿದ ಅವರು,  ಕಾಯ್ದೆಯಲ್ಲಿ ಪ್ರತ್ಯೇಕ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶುಲ್ಕ ಮತ್ತು ಪ್ರವೇಶ ನಿರ್ಧರಿಸು ವಾಗ ಸಹಜ ನ್ಯಾಯ ಸಿದ್ಧಾಂತವನ್ನು ಪಾಲಿಸಬೇಕು ಎಂದು ಕಾಲೇಜುಗಳ ಮುಖ್ಯಸ್ಥರು ಕೋರಿದರು. 

‘ಈ ಬಗ್ಗೆ ಯಾವುದೇ ರೀತಿ ಸಂಶಯ ಬೇಡ. ನಿಮ್ಮ ಅಹವಾಲುಗಳನ್ನು ಆಲಿಸು ತ್ತೇವೆ. ಅಗತ್ಯಬಿದ್ದರೆ ನಿಮ್ಮ  ಸಂಸ್ಥೆಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ತಪಾಸಣೆ ಮಾಡುತ್ತೇವೆ’ ಎಂದು ನ್ಯಾಯಮೂರ್ತಿ ಅಜಿತ್‌ ಗುಂಜಾಲ್‌  ತಿಳಿಸಿದರು.

ಖಾಸಗಿ ಕಾಲೇಜುಗಳ ಮುಖ್ಯಸ್ಥರು ‘ಸೂಪರ್‌ ನ್ಯೂಮರರಿ’ ಕೋಟಾ ಅಡಿಯಲ್ಲಿ ಸೀಟು ನೀಡುವುದು ಬೇಡ ಎಂದು ಪ್ರತಿಪಾದಿಸಿದರು.

ಸಭೆ ನಂತರ ಮಾತನಾಡಿದ ಶುಲ್ಕ ನಿಗದಿ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಅಜಿತ್‌ ಗುಂಜಾಳ್‌, ಶುಲ್ಕದ ಮಿತಿ ಯನ್ನು ನಾವು ನಿಗದಿಪಡಿಸುವುದಿಲ್ಲ ಎಂದರು. 2006ರ ಕಾಯ್ದೆ ಅನ್ವಯ ಕಾಲೇಜುಗಳಲ್ಲಿನ ಮೂಲಸೌಕರ್ಯ ಮತ್ತು ಇತರ ಅಂಶಗಳನ್ನು ಪರಿಗಣಿಸಿ ಶುಲ್ಕ ನಿಗದಿಪಡಿಸಲಾಗುವುದು.  ಆಯಾ ಕಾಲೇಜುಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಏಕರೂಪ ಶುಲ್ಕವನ್ನು ನಿಗದಿಪಡಿಸಬೇಕು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ ಎಂದು ನುಡಿದರು.

ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕಕ್ಕೆ ಕಾಲೇಜುಗಳು ರಿಯಾಯಿತಿ ನೀಡಬೇಕು. ಈ ರಿಯಾಯಿತಿ ಮೊತ್ತವನ್ನು ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ, ಇದು ಆಯಾ ಕಾಲೇಜುಗಳು ಎಷ್ಟು ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.