ADVERTISEMENT

`ಅಲ್ಪ ಬಹುಮತ'ದ ಬಿಜೆಪಿ ಸರ್ಕಾರಕ್ಕೆ ಮತ್ತಷ್ಟು ಸಂಕಟ

ತರೀಕೆರೆಯ ಶಾಸಕ ಸುರೇಶ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2013, 19:59 IST
Last Updated 1 ಫೆಬ್ರುವರಿ 2013, 19:59 IST
`ಅಲ್ಪ ಬಹುಮತ'ದ ಬಿಜೆಪಿ ಸರ್ಕಾರಕ್ಕೆ ಮತ್ತಷ್ಟು ಸಂಕಟ
`ಅಲ್ಪ ಬಹುಮತ'ದ ಬಿಜೆಪಿ ಸರ್ಕಾರಕ್ಕೆ ಮತ್ತಷ್ಟು ಸಂಕಟ   

ಬೆಂಗಳೂರು/ಮಡಿಕೇರಿ:  ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ತರೀಕೆರೆ ಕ್ಷೇತ್ರದ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ರಾಜೀನಾಮೆ ನೀಡಿರುವುದರಿಂದ `ಅಲ್ಪಬಹುಮತದ' ಬಿಜೆಪಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿಯ 14  ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಈ ಪೈಕಿ 12 ಶಾಸಕರ ರಾಜೀನಾಮೆ ಮಂಗಳವಾರ ಅಂಗೀಕಾರ ಆಗಿದೆ. ತಾಂತ್ರಿಕ ಕಾರಣಗಳಿಂದಾಗಿ ನಾಗಠಾಣ ಕ್ಷೇತ್ರದ ಶಾಸಕ ವಿಠಲ ಕಟಕದೋಂಡ ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ.

ಶುಕ್ರವಾರ ಸಂಜೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ಸುರೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸುರೇಶ್ ಹಾಗೂ ಕಟಕದೋಂಡ ರಾಜೀನಾಮೆ ಅಂಗೀಕಾರ ಆದರೆ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 103ಕ್ಕೆ ಕುಸಿಯಲಿದೆ.

ಆಗ ಸದನದ ಬಲ 209 ಆಗಲಿದೆ. ಬಹುಮತಕ್ಕೆ 105 ಸದಸ್ಯರ ಅಗತ್ಯ ಬರುತ್ತದೆ. ಜವಳಿ ಸಚಿವರಾಗಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ನಾಮಕರಣ ಸದಸ್ಯ ಡೆರಿಕ್ ಫುಲಿನ್ ಫಾ ಸೇರಿದರೆ ಬಿಜೆಪಿ ಬಲ 105 ಆಗಲಿದೆ. ಸಮಬಲ ಇದ್ದಾಗ ಸ್ಪೀಕರ್ ಮತ ಚಲಾಯಿಸಬಹುದು. ಕಾಂಗ್ರೆಸ್, ಜೆಡಿಎಸ್ ಹಾಗೂ ಆರು ಮಂದಿ ಪಕ್ಷೇತರ ಶಾಸಕರು ಒಟ್ಟಿಗೆ ಸೇರಿದರೆ ಅವರ ಬಲ 103. ಬಿಜೆಪಿ ಸರ್ಕಾರದ ಸಂಖ್ಯಾಬಲ ದಿನೇ ದಿನೇ ಕಡಿಮೆ ಆಗುತ್ತಿದೆ. ಬಿಜೆಪಿಯ ಇನ್ನು ಮೂವರು ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.

ಸುರೇಶ್ ಶುಕ್ರವಾರ ಬೆಳಿಗ್ಗೆ ರಾಜೀನಾಮೆ ನೀಡಲು ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಗೆ ಬಂದಿದ್ದರು. ಸ್ಪೀಕರ್ ಇಲ್ಲದ ಕಾರಣ ಕಾರ್ಯದರ್ಶಿ ಓಂಪ್ರಕಾಶ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅದನ್ನು ಸಭಾಧ್ಯಕ್ಷರಿಗೆ ನೀಡುವುದಾಗಿ ಓಂಪ್ರಕಾಶ್ ತಿಳಿಸಿದರು. ಆದರೂ ಸುರೇಶ್‌ಗೆ ಸಮಾಧಾನ ಆಗಲಿಲ್ಲ.

ಬೋಪಯ್ಯ ಗುರುವಾರವೇ ಕೊಡಗಿಗೆ ಹೋಗಿದ್ದನ್ನು ಅರಿತ ಅವರು ಮಾಜಿ ಶಾಸಕ ಹರೀಶ್ ಜತೆ ಮಡಿಕೇರಿಯತ್ತ ಪ್ರಯಾಣ ಬೆಳೆಸಿದರು. ಸಂಜೆ 5 ಗಂಟೆ ಸುಮಾರಿಗೆ ಇಬ್ಬರೂ ಮಡಿಕೇರಿ ತಲುಪಿದರು.

ಮಡಿಕೇರಿ ಬಳಿಯ ಕರ್ಣಂಗೇರಿ ಗ್ರಾಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಬೋಪಯ್ಯ ಸಂಜೆ 6ರ ವೇಳೆಗೆ ತಮ್ಮ ಕಚೇರಿಗೆ ಬಂದರು. ಅಲ್ಲಿಗೆ ತೆರಳಿದ ಶಾಸಕ ಸುರೇಶ್ ರಾಜೀನಾಮೆ ನೀಡಿ ಹೊರಬಂದರು. ಈ ಸಂದರ್ಭದಲ್ಲಿ ಕಚೇರಿಯೊಳಗೆ ಪ್ರವೇಶಿಸದಂತೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿತ್ತು.

ರಾಜೀನಾಮೆ ಪತ್ರ ಕೊಟ್ಟಿದ್ದಾರೆ: ಕಚೇರಿಯಿಂದ ಹೊರಬಂದ ಬೋಪಯ್ಯ, `ಸುರೇಶ್ ರಾಜೀನಾಮೆ ಪತ್ರವನ್ನು ನನ್ನ ಕೈಗೆ ಕೊಟ್ಟಿದ್ದಾರೆ. ಇದರ ಹೊರತಾಗಿ ಬೇರೇನೂ ಹೇಳಿಲ್ಲ' ಎಂದರು.

ಕೆಜೆಪಿ ಬಲಪಡಿಸಲು ನಿರ್ಧಾರ: `ಯಡಿಯೂರಪ್ಪ ನೇತೃತ್ವದ ಕೆಜೆಪಿ ಬಲಪಡಿಸುವ ಉದ್ದೇಶದಿಂದಲೇ ಬಿಜೆಪಿಯಿಂದ ಹೊರನಡೆಯಲು ನಿರ್ಧರಿಸಿದ್ದೇನೆ. ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಜಾರಿಗೆ ತಂದ ಹಲವು ಜನಪರ ಯೋಜನೆಗಳಿಂದ ಪ್ರೇರಿತನಾಗಿ ಅವರನ್ನು ಹಿಂಬಾಲಿಸುವ ನಿರ್ಧಾರ ಕೈಗೊಂಡಿದ್ದೇನೆ' ಎಂದು ನಂತರ ಸುರೇಶ್ ಸುದ್ದಿಗಾರರಿಗೆ ತಿಳಿಸಿದರು.

ಬೆಂಬಲ 4ರ ನಂತರ  ನಿರ್ಧಾರ-ತಂಗಡಗಿ
ಕೊಪ್ಪಳ
: ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಫೆ. 4ರ ನಂತರ ನಿರ್ಧರಿಸಲಾಗುವುದು ಎಂದು ಪಕ್ಷೇತರ ಶಾಸಕ ಶಿವರಾಜ ತಂಗಡಗಿ ಹೇಳಿದ್ದಾರೆ. ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.