ADVERTISEMENT

ಅಹಿಂದ ಅಭಿವೃದ್ಧಿ: ಶ್ವೇತ ಪತ್ರಕ್ಕೆ ಬಿಎಸ್‌ವೈ ಆಗ್ರಹ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST

ಬೆಂಗಳೂರು:  ‘ನಾಲ್ಕೂವರೆ ವರ್ಷಗಳ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಹಿಂದ ಸಮುದಾಯಗಳಿಗೆ ಒದಗಿಸಿರುವ ಅನುದಾನ ಕುರಿತು ಶ್ವೇತ ಪತ್ರ ಹೊರಡಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಭರವಸೆಗಳನ್ನು ನೀಡುವ ಮೂಲಕ ಹಿಂದುಳಿದ ವರ್ಗದ ಜನರನ್ನು ಸಿದ್ದರಾಮಯ್ಯ ಮರಳು ಮಾಡುತ್ತಿದ್ದಾರೆ. ತಾವೊಬ್ಬ ಹಿಂದುಳಿದ ವರ್ಗಗಳ ನಾಯಕ ಎಂದು ಭ್ರಮಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ 70ಕ್ಕೆ ಹೆಚ್ಚಿಸುವುದಾಗಿ ನಾಟಕ ಮಾಡುತ್ತಿರುವ ಮುಖ್ಯಮಂತ್ರಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಇದನ್ನು ನಂಬಿ ದಲಿತರು, ಹಿಂದುಳಿದವರು ಮೋಸ ಹೋಗಬಾರದು’ ಎಂದು ಮನವಿ ಮಾಡಿದರು.

ADVERTISEMENT

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಮುಖ್ಯಮಂತ್ರಿಯಾಗಲು ನೆರವು ನೀಡಿದ್ದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಂಥ ನಾಯಕರನ್ನೇ ಮೂಲೆಗುಂಪು ಮಾಡಿದ ಸಿದ್ದರಾಮಯ್ಯ, ಯಾವ ಹಿಂದುಳಿದ ವರ್ಗದ ಉದ್ಧಾರ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.

‘ಪ್ರಗತಿಪರ ಚಿಂತಕಿ ಗೌರಿ ಲಂಕೇಶ್‌ ಹತ್ಯೆ ಆಗಿ ತಿಂಗಳು ಕಳೆಯಿತು. ಆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ, ಈ ಪ್ರಕರಣವನ್ನು ಸಿಬಿಐಗೆ ಏಕೆ ಒಪ್ಪಿಸುತ್ತಿಲ್ಲ’ ಎಂದು ಕಿಡಿಕಾರಿದರು.

ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.