ADVERTISEMENT

ಆನೆಗಳಿಗೆ ಕುಶಾಲ ತೋಪು ತರಬೇತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST
ಆನೆಗಳಿಗೆ ಕುಶಾಲ ತೋಪು ತರಬೇತಿ
ಆನೆಗಳಿಗೆ ಕುಶಾಲ ತೋಪು ತರಬೇತಿ   

ಮೈಸೂರು: ನಾಡಹಬ್ಬ ದಸರಾದ ಕೊನೆಯ ದಿನವಾದ ವಿಜಯದಶಮಿಯಂದು ಅಂಬಾರಿ ಹೊತ್ತ ಬಲರಾಮನಿಗೆ ಪುಷ್ಪಾರ್ಚನೆ ಮಾಡುವ ಮುನ್ನ 21 ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ. ಕುಶಾಲತೋಪು ಸಿಡಿದಾಗ ಎಲ್ಲರ ಎದೆ ನಡುಗುತ್ತದೆ. ಕುಶಾಲ ತೋಪು ಹಾರಿಸುವುದು ಸಾಮಾನ್ಯ ಕೆಲಸವಲ್ಲ. ಎಲ್ಲರಿಗೂ ಶಬ್ದ ಮಾತ್ರ ಕೇಳುತ್ತದೆ. ಆದರೆ ಇದಕ್ಕಾಗಿ ಶ್ರಮಿಸುವ ಸಿಬ್ಬಂದಿಯ ಹೃದಯ ಬಡಿತ ಬೇರ‌್ಯಾರಿಗೂ ಕೇಳುವುದಿಲ್ಲ.

90 ಸೆಕೆಂಡ್‌ಗಳಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸಲಾಗುತ್ತದೆ! ಕುಶಾಲತೋಪು ಸಿಡಿಯುವುದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಸಿಬ್ಬಂದಿ ಎಚ್ಚರ ವಹಿಸುತ್ತಾರೆ. ನಿಗದಿತ ಸಮಯದೊಳಗೆ ಕುಶಾಲ ತೋಪು ಸಿಡಿಸುವಷ್ಟರಲ್ಲಿ ಪೊಲೀಸ್ ಸಿಬ್ಬಂದಿಯ ಎದೆಬಡಿತ ಹೆಚ್ಚಾಗಿರುತ್ತದೆ. ಎಲ್ಲವು ನಿಗದಿತ ಸಮಯದೊಳಗೆ ಮುಗಿದು ಮೆರವಣಿಗೆ ಹೊರಟಿತೆಂದರೆ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 

ದಸರಾ ಮಹೋತ್ಸವದಲ್ಲಿ ಕುಶಾಲ ತೋಪುಗಳನ್ನು ಸಿಡಿಸಲೆಂದೇ ಅರಮನೆ ಆವರಣದಲ್ಲಿ ರಾಜರ ಕಾಲದಿಂದಲೂ ಫಿರಂಗಿ ಗಾಡಿಗಳನ್ನು ಇಡಲಾಗಿದೆ. ಒಟ್ಟು 11 ಫಿರಂಗಿ ಗಾಡಿಗಳಿದ್ದು ಇವುಗಳಲ್ಲಿ 7 ಫಿರಂಗಿಗಳಿಂದ ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ.

ಕುಶಾಲ ತೋಪು ಸಿಡಿಸಲು ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳಲು ಉಳಿದ 4 ಗಾಡಿಗಳನ್ನು ಬಳಸಲಾಗುತ್ತದೆ. ಅರಮನೆ ಆವರಣದ ಮುಂಭಾಗ ಪ್ರವಾ ಸಿಗರು ನೋಡಲೆಂದೇ ಫಿರಂಗಿ ಗಾಡಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಕುಶಾಲ ತೋಪು ಸಿಡಿಸಲು ನಗರ ಸಶಸ್ತ್ರ ಪಡೆ (ಸಿಎಆರ್) 27 ಸಿಬ್ಬಂದಿಯನ್ನು ಬಳಸಲಾಗುತ್ತದೆ. ಇವರು ಉತ್ತಮ ದೇಹದಾರ್ಢ್ಯ ಹೊಂದಿದ್ದು, ಚಾಕಚಕ್ಯತೆಯಿಂದ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಫಿರಂಗಿ ನಳಿಕೆಗಳನ್ನು ಶುದ್ಧ ಮಾಡುವುದರಿಂದ ಹಿಡಿದು ಕುಶಾಲತೋಪು ಹಾರಿಸುವವರೆಗೂ ಇವರಿಗೆ ಸೂಕ್ತ ತರಬೇತಿ ನೀಡಲಾಗಿರುತ್ತದೆ.

ಗಜಪಡೆಗೆ ತರಬೇತಿ:  ಕುಶಾಲತೋಪುಗಳು ಸಿಡಿಸಿದಾಗ ಗಜಪಡೆ ಬೆಚ್ಚದಂತೆ ಪ್ರತಿ ವರ್ಷ ತರಬೇತಿ ನೀಡಲಾಗುತ್ತದೆ. ಸಿಎಆರ್ ಸಿಬ್ಬಂದಿ ಗಜಪಡೆ ಮುಂದೆ ಸಿಡಿಮದ್ದುಗಳನ್ನು ಸಿಡಿಸಿ ಶಬ್ದಕ್ಕೆ ಒಗ್ಗಿಕೊಳ್ಳುವಂತೆ ತಯಾರು ಮಾಡುತ್ತಾರೆ. ಭಾರಿ  ಶಬ್ದಕ್ಕೆ ಆನೆ ಬೆಚ್ಚಿದ್ದೇ ಆದಲ್ಲಿ ಲಕ್ಷಾಂತರ ಜನ ಸೇರುವ ಸ್ಥಳದಲ್ಲಿ ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಆನೆಗಳಿಗೆ ಸಿಡಿಮದ್ದುಗಳನ್ನು ಸಿಡಿಸಿ ತರಬೇತಿ ನೀಡುತ್ತಾರೆ. ಗಜಪಡೆ ಮುಂದೆ ಕುಶಾಲ ತೋಪು ತಾಲೀಮು ಬುಧವಾರ ಆರಂಭವಾಗಿದೆ.

ಅಂಬಾರಿ ಹೊತ್ತ ಆನೆಗೆ ಹೆಲಿಕಾಪ್ಟರ್ ಮೇಲಿಂದ ಪುಷ್ಪವೃಷ್ಟಿ ಎರಚಲು 2005 ನೇ ಸಾಲಿನಲ್ಲಿ ತಾಲೀಮು ನಡೆಸುವಾಗ ಅರಮನೆ ಆವರಣದಲ್ಲಿ ಕೆಳ ಮಟ್ಟದಲ್ಲಿ ಹೆಲಿಕಾಪ್ಟರ್ ಬಂದಿದ್ದರಿಂದ ಬಲರಾಮ ಬೆಚ್ಚಿ ಓಡಿ ಹೋಗಿದ್ದ. ಅಲ್ಲದೆ ಈ ಹಿಂದೆ ಕುಶಾಲತೋಪು ಸಿಡಿಸುವಾಗ ಇಬ್ಬರು ಸಿಎಆರ್ ಸಿಬ್ಬಂದಿ ಗಾಯಗೊಂಡಿದ್ದರು.

ಗಾಯಗೊಂಡ ಸಿಬ್ಬಂದಿಗೆ ಇದುವರೆಗೆ ಯಾವುದೇ ಪರಿಹಾರ ನೀಡಿಲ್ಲ. ಜೀವದ ಹಂಗು ತೊರೆದು ಕುಶಾಲ ತೋಪುಗಳನ್ನು ಸಿಡಿಸುವ ಸಿಬ್ಬಂದಿಗೆ ಪ್ರತಿ ವರ್ಷ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಲಾಗುತ್ತಿದೆಯೇ ಹೊರತು ಇದುವರೆಗೂ ಪ್ರೋತ್ಸಾಹ ಧನ ನೀಡಿಲ್ಲ. ಕರ್ತವ್ಯದ ಒಂದು ಭಾಗವಾಗಿ ಇವರು ಹೆಚ್ಚುವರಿ ಕಾರ್ಯನಿರ್ವಹಿಸುತ್ತಾರೆ.

ಕುಶಾಲತೋಪು ಸಿಡಿಸಿದಾಗ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪದೆ ಪದೇ ತಾಲೀಮು ಮಾಡಲಾಗುತ್ತದೆ. ಶಬ್ದ, ವಾಸನೆಗೆ ಒಗ್ಗಿಕೊಳ್ಳಲೆಂದೆ ಕುಶಾಲತೋಪು, ಸಿಡಿಮದ್ದು ಸಿಡಿಸಲು ಬಳಸುವ ಪುಡಿಯನ್ನು ಗಜಪಡೆಗೆ ಆಘ್ರಾಣಿಸಲಾಗುತ್ತದೆ.

`ಈ ಬಾರಿ ಕುಶಾಲತೋಪು ಸಿಡಿಸಲು ವಿಜಯದಶಮಿಗೂ ಮುನ್ನ ತಾಲೀಮು ನಡೆಸಲಾಗುತ್ತಿದೆ. ಫಿರಂಗಿ ಗಾಡಿಗಳ ಸ್ವಚ್ಛತೆ ಕಾರ್ಯ ನಡೆದಿದೆ. ಮದ್ದು-ಗುಂಡುಗಳ ಹದ ಮಾಡಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ~ ಎಂದು ಕುಶಾಲ ತೋಪು ತರಬೇತಿ ಪಡೆ ಉಸ್ತುವಾರಿ ವಹಿಸಿರುವ ಎಸಿಪಿ (ಸಿಎಆರ್) ಸಿದ್ದರಾಜು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.