ADVERTISEMENT

ಆನೆ ಸಾವು: ಕಳವಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 5:50 IST
Last Updated 8 ಜನವರಿ 2011, 5:50 IST
ಆನೆ ಸಾವು: ಕಳವಳ
ಆನೆ ಸಾವು: ಕಳವಳ   

ಬೆಂಗಳೂರು:  ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೇಪುರ ಗ್ರಾಮದಲ್ಲಿ ಮೂರು ಆನೆ ಮರಿಗಳು ಸಾವನ್ನಪ್ಪಿರುವ ಬಗ್ಗೆ ಹೈಕೋರ್ಟ್ ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಆನೆಮರಿಗಳ ಸಾವಿನ ಬಗ್ಗೆ ಪತ್ರಿಕೆಗಳಲ್ಲಿ ಓದಿ ಬಹಳ ಖೇದವಾಯಿತು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇಂತಹ ಪ್ರಕರಣ ಮರುಕಳಿಸಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳ ಗೊಂಡ ವಿಭಾಗೀಯ ಪೀಠ ತಿಳಿಸಿತು.

2008ನೇ ಸಾಲಿನಲ್ಲಿ ರಾಜ್ಯದ ವಿವಿಧೆಡೆ ಬಹಳಷ್ಟು ಆನೆಗಳು ಸಾವನ್ನಪ್ಪಿದ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಅದೇ ಸಾಲಿನಲ್ಲಿ ದಾಖಲು ಮಾಡಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆನೆಗಳ ಸಾವಿನ ತಡೆಗೆ ಸರ್ಕಾರದಿಂದ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ವಕೀಲರು ವಿವರಿಸಿದರು.

ವರದಿ ಏನಿದೆ? ರಾಜ್ಯದ ವಿವಿಧೆಡೆಗಳಲ್ಲಿ ಆನೆ ಹಾವಳಿ ತಪ್ಪಿಸಲು ಮುಂಜಾಗ್ರತಾ ಕ್ರಮಕ್ಕೆ ಪ್ರಸಕ್ತ ಸಾಲಿನಲ್ಲಿ (2010-11) 2.89 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 2.25 ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಈ ಹಣದಲ್ಲಿ 16 ಕಿ.ಮೀ. ವ್ಯಾಪ್ತಿಯಲ್ಲಿ ಆನೆ ಕಂದಕ ನಿರ್ಮಾಣ, 18 ಕಿ.ಮೀ. ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ವಹಣೆ, 13 ಕಿ.ಮೀ. ವ್ಯಾಪ್ತಿಯಲ್ಲಿ ಸೌರತಂತಿ ಬೇಲಿ ನಿರ್ಮಾಣ ಹಾಗೂ 24 ಕಿ.ಮೀ ವ್ಯಾಪ್ತಿಯಲ್ಲಿ ಇತರೆ ಕಾಮಗಾರಿ ೂಳ್ಳಲಾಗಿದೆ. ವನ್ಯಮೃಗಗಳ ಹಾವಳಿಯಿಂದ ಯಾರಾದರೂ ಮೃತಪಟ್ಟರೆ ಅವರಿಗೆ ನೀಡುತ್ತಿರುವ ಪರಿಹಾರವನ್ನು 1.5ಲಕ್ಷ ರೂಪಾಯಿಗಳಿಂದ 2ಲಕ್ಷಕ್ಕೆ ಏರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಆನೆಗಳ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸದ್ಯ 1.70 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇನ್ನೂ 3.7 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಿದೆ. ಅಷ್ಟೇ ಅಲ್ಲದೇ ಜನ ವಾಸ ಇರುವ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಕಾಡಾನೆಗಳನ್ನು ಸ್ಥಳಾಂತರ ಮಾಡುವ ಅಗತ್ಯ ಇದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದು ರಾಜ್ಯ ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ವಿವರಿಸಿದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಅರ್ಜಿಯಲ್ಲಿ ಪ್ರತಿವಾದಿಯಾಗಿಸಿ ಪೀಠ ಆದೇಶಿಸಿತು.  ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳಿಗೆ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಕೇಂದ್ರಕ್ಕೆ ನ್ಯಾಯಮೂರ್ತಿಗಳು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.