ADVERTISEMENT

ಆನೆ ಸ್ಥಳಾಂತರವಿಲ್ಲ: ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಂಗಳೂರು: ರಾಜ್ಯದ 29 ಆನೆಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರ ಮಾಡುವ ಸಂಬಂಧ ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಸದ್ಯ ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.

ಈ ಆನೆಗಳ ಸ್ಥಳಾಂತರಕ್ಕೆ ತಡೆ ನೀಡುವಂತೆ ಕೋರಿ `ಕ್ಯೂಪಾ~ ಸರ್ಕಾರೇತರ ಸಂಸ್ಥೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಈ ಮಾಹಿತಿ ನೀಡಿದರು.

`ಸಫಾರಿ~ ಉದ್ದೇಶಕ್ಕಾಗಿ ಈ ಆನೆಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಮಧ್ಯಪ್ರದೇಶದ ಹವಾಮಾನ, ಕರ್ನಾಟಕದ ಹವಾಮಾನದಂತೆ ಇಲ್ಲ. ಆಹಾರ ಪದ್ಧತಿಯಲ್ಲಿಯೂ ವ್ಯತ್ಯಾಸ ಇದೆ. ಇದು ಆನೆಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಅಲ್ಲಿ 150 ವರ್ಷಗಳಿಂದ ಯಾವುದೇ ಆನೆಗಳು ವಾಸ ಮಾಡುತ್ತಿಲ್ಲ. ಇಂತಹ ಪ್ರದೇಶಕ್ಕೆ ರಾಜ್ಯದ ಆನೆಗಳನ್ನು ಸ್ಥಳಾಂತರ ಮಾಡಿದರೆ ಅವುಗಳ ಜೀವಕ್ಕೆ ಅಪಾಯ~ ಎನ್ನುವುದು ಅರ್ಜಿದಾರರ ದೂರು.

ಆದರೆ ಈ ಆರೋಪಕ್ಕೆ ಕೊಲ್ಲೆ ಅವರು ಆಕ್ಷೇಪ ವ್ಯಕ್ತಪಡಿಸಿದರು. `ಆನೆಗಳನ್ನು ಸಫಾರಿಗಾಗಿ ಸ್ಥಳಾಂತರ ಮಾಡುತ್ತಿಲ್ಲ. ಅರ್ಜಿದಾರರ ಆರೋಪದಂತೆ ಇವು ಕಾಡಾನೆಗಳಲ್ಲ. ಬದಲಿಗೆ ಪಳಗಿರುವ ಆನೆಗಳು. ಇವುಗಳ ಸ್ಥಳಾಂತರದಿಂದ ಹಾನಿ ಏನೂ ಆಗದು. ಕೇಂದ್ರ ಸರ್ಕಾರ ಕೂಡ ಸ್ಥಳಾಂತರಕ್ಕೆ ಅನುಮತಿ ನೀಡಿದೆ. ಆದರೆ ಕೆಲವೊಂದು ಕಾರಣಗಳಿಂದ ಸದ್ಯ ಸ್ಥಳಾಂತರವನ್ನು ತಡೆಹಿಡಿಯಲಾಗಿದೆ~ ಎಂದರು.

ಈ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್‌ಹಾಗೂ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.

ಅಂತರ್ಜಲದ ದುರುಪಯೋಗ

ಅಂತರ್ಜಲದ ದುರುಪಯೋಗ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇದರ ರಕ್ಷಣೆಗಾಗಿ ಇರುವ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ ಮಂಗಳವಾರ ನಿರ್ದೇಶಿಸಿದೆ.

ಅಂತರ್ಜಲದ ದುರ್ಬಳಕೆ ಕುರಿತು `ಪವರ್ ವಾಟರ್ ಸಪ್ಲೈ ಆಡಿಟರ್ಸ್‌~ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಅಂತರ್ಜಲ ರಕ್ಷಣೆಗೆ `ಕರ್ನಾಟಕ ಅಂತರ್ಜಲ ನೀರು (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆ~ ಇದೆ. ಈ ಕಾಯ್ದೆಯಲ್ಲಿ ಜಲದ ರಕ್ಷಣೆ ಬಗ್ಗೆ ಉಲ್ಲೇಖವಿದೆ. ಆದರೆ ಸರ್ಕಾರ ಅದನ್ನು ಜಾರಿಗೊಳಿಸಲು ವಿಫಲವಾಗಿದೆ.

ಇದರಿಂದ ಕೊಳವೆ ಬಾವಿ ತೋಡುವುದು, ನೀರನ್ನು ಅಕ್ರಮವಾಗಿ ಶೇಖರಿಸುವುದು ಇತ್ಯಾದಿಗಳ ಮೂಲಕ ಅಂತರ್ಜಲಕ್ಕೆ ಧಕ್ಕೆಯಾಗುವಂತೆ ಕೆಲವು ವ್ಯಕ್ತಿಗಳು ನಡೆದುಕೊಳ್ಳುತ್ತಿದ್ದಾರೆ. ಅಂತರ್ಜಲದ ರಕ್ಷಣೆಗೆ ಸುಪ್ರೀಂ ಕೋರ್ಟ್ ಕೂಡ ಕೆಲವು ಮಾರ್ಗಸೂಚಿ ರೂಪಿಸಿದೆ. ಆದರೆ ಸರ್ಕಾರ ಇದನ್ನು ಜಾರಿಗೊಳಿಸಲು ವಿಫಲವಾಗಿದೆ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.

ಸ್ವಾಮೀಜಿ ವಿರುದ್ಧ ತನಿಖೆ

ಸರ್ಕಾರಕ್ಕೆ ಸೇರಿದ 15.31 ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರುವ ಆರೋಪ ಹೊತ್ತ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ ನಿರ್ದೇಶಿಸಿದೆ.

`ಸ್ವಾಮೀಜಿ ಅವರು ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಿನ ಹುಳಿಮಾವು ಪ್ರದೇಶದ ಮೀನಾಕ್ಷಿ ದೇವಸ್ಥಾನದ ಸಮೀಪ ಭೂಮಿ ಒತ್ತುವರಿ ಮಾಡಿದ್ದಾರೆ. ಈ ಭೂಮಿಯಲ್ಲಿ ಅವರು ಅಕ್ರಮವಾಗಿ ಬಹುಮಹಡಿಯ ಶಾಲಾ ಕಟ್ಟಡವನ್ನೂ ನಿರ್ಮಿಸಿದ್ದಾರೆ~ ಎಂದು ಸಿ. ಲಕ್ಷ್ಮಿನಾರಾಯಣ ಅವರು ಸಲ್ಲಿಸಿರುವ ದೂರು ಇದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.