ADVERTISEMENT

ಆನ್‌ಲೈನ್ ಪಡಿತರ ಚೀಟಿ ಈಗ ಲಭ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಬೆಂಗಳೂರು:  ರಾಜ್ಯದಲ್ಲಿ ಇದುವರೆಗೆ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಸುಮಾರು 24.72 ಲಕ್ಷ ಅರ್ಜಿಗಳು ಬಂದಿದ್ದು, ಅರ್ಹ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಮಾರು 39 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ ಬೆನ್ನಲ್ಲೇ, ಪಡಿತರ ಚೀಟಿ ಇಲ್ಲದ ಅರ್ಹ ಫಲಾನುಭವಿಗಳಿಗೆ ಹೊಸದಾಗಿ ಕಾರ್ಡ್‌ಗಳನ್ನು ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.

ಬೆಂಗಳೂರು ದಕ್ಷಿಣ ವಲಯ, ಬಳ್ಳಾರಿ, ಬಾಗಲಕೋಟೆ, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗದಲ್ಲಿ ಅರ್ಜಿ ಸಲ್ಲಿಕೆಯ ಜೊತೆ ಜೊತೆಗೆ ಅವುಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ.

ಆನ್‌ಲೈನ್ ಮೂಲಕ ಬರುವ ಅರ್ಜಿಗಳನ್ನು ಎನ್‌ಐಸಿ ನೆರವಿನೊಂದಿಗೆ ಪರಿಷ್ಕರಿಸಿ, ಅರ್ಹ ಅರ್ಜಿದಾರರ ಕುಟುಂಬದ ಸದಸ್ಯರ ಭಾವಚಿತ್ರ ಮತ್ತು ಬೆರಳಚ್ಚು (ಬಯೊಮೆಟ್ರಿಕ್) ಪಡೆಯುವ ಕಾರ್ಯ ಮೊದಲ ಹಂತದಲ್ಲಿ ಆರು ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಆಯ್ಕೆಯಾದ ಅರ್ಜಿದಾರರಿಗೆ ಉಪ ನಿರ್ದೇಶಕರ ಕಚೇರಿ ಇಲ್ಲವೇ ತಾಲ್ಲೂಕು ಕಚೇರಿಗೆ ಬಂದು ಭಾವಚಿತ್ರ, ಬೆರಳಚ್ಚು ನೀಡುವಂತೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ. ಈ ರೀತಿ ಸಂದೇಶ ಪಡೆದ ಕುಟುಂಬದ ಸದಸ್ಯರು  ಈಗಾಗಲೇ ಸಂಬಂಧಿಸಿದ ಉಪ ನಿರ್ದೇಶಕರ ಕಚೇರಿ ಅಥವಾ ತಾಲ್ಲೂಕು ಕಚೇರಿಗೆ ಹೋಗಿ ಸದರಿ ಮಾಹಿತಿ ನೀಡುತ್ತಿದ್ದಾರೆ.

ಈ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ನೋಡಿಕೊಂಡು ಬರುವ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ. ಸದ್ಯಕ್ಕೆ ಈಗ ನಗರ ಪ್ರದೇಶಗಳಲ್ಲಿ ಪಡಿತರ ಚೀಟಿ ವಿತರಣೆಗೆ ಚಾಲನೆ ನೀಡಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಆದಷ್ಟು ಬೇಗ ಈ ಪ್ರಕ್ರಿಯೆ ಶುರುವಾಗಲಿದೆ ಎಂದು ಅವರು ಹೇಳಿದರು.

ಇನ್ನು ತಿರಸ್ಕರಿಸಲ್ಪಡುವ ಅರ್ಜಿದಾರರಿಗೂ, ಯಾವ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬ ನಿರ್ಣಯದ ಸಂದೇಶವನ್ನು ಎಸ್‌ಎಂಎಸ್ ಮೂಲಕವೇ ತಿಳಿಸಲಾಗುತ್ತದೆ. ಇದಕ್ಕಾಗಿ ಅರ್ಜಿ ಪಡೆಯುವಾಗಲೇ ಮೊಬೈಲ್ ಸಂಖ್ಯೆಯನ್ನು ಪಡೆಯಲಾಗಿದೆ.

ಸ್ಥಳ ಪರಿಶೀಲನೆ: ಆನ್‌ಲೈನ್ ಮೂಲಕ ನೀಡಿರುವ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಲು ಅಧಿಕಾರಿಗಳು ಅರ್ಜಿದಾರರ ಮನೆಗಳಿಗೆ ಭೇಟಿ ನೀಡುತ್ತಾರೆ. ಒಬ್ಬರಿಗಿಂತ ಹೆಚ್ಚು ಅರ್ಜಿದಾರರು ವಿದ್ಯುತ್ ಮೀಟರ್‌ನ ಒಂದೇ ಆರ್.ಆರ್ ಸಂಖ್ಯೆ ನೀಡಿದ್ದರೆ, ಅಧಿಕಾರಿಗಳು ಪರಿಶೀಲನೆ ನಡೆಸಿ ನಿಜವಾದ ಅರ್ಹ ಅರ್ಜಿದಾರರಿಗೆ ಮಾತ್ರ ಪಡಿತರ ಚೀಟಿ ನೀಡಲಾಗುತ್ತದೆ.

ಅರ್ಜಿದಾರರ ಭಾವಚಿತ್ರ ಮತ್ತು ಬೆರಳಚ್ಚು ಪಡೆಯುವ ಬಗ್ಗೆ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಬೇಕಾದ ಕಾರಣ ಹಂತ ಹಂತವಾಗಿ ಪಡಿತರ ಚೀಟಿ ವಿತರಿಸಲಾಗುತ್ತದೆ. ಒಮ್ಮೆಗೆ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಲು ಕಷ್ಟವಾಗುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಈಗಲೂ ಅವಕಾಶ: ಪಡಿತರ ಚೀಟಿ ಹೊಂದಿಲ್ಲದೆ ಇರುವವರು ಈಗಲೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಸೌಲಭ್ಯ ಇಲ್ಲದೆ ಇದ್ದರೆ ನೇರವಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದುವರೆಗೆ ಬಿಪಿಎಲ್ ಕಾರ್ಡ್‌ಗಾಗಿ ಸುಮಾರು 18.06 ಲಕ್ಷ  ಮತ್ತು ಎಪಿಎಲ್ ಕಾರ್ಡ್‌ಗಾಗಿ 6.66 ಲಕ್ಷ ಸೇರಿದಂತೆ ಒಟ್ಟಾರೆ 24.72 ಲಕ್ಷ ಅರ್ಜಿಗಳು ಬಂದಿವೆ.

 ಈಗಲೂ ಅರ್ಜಿಗಳು ಬರುತ್ತಿರುವುದರಿಂದ ಒಟ್ಟಾರೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದ್ದು, ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಸುಮಾರು 25 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ಸುಮಾರು 14 ಲಕ್ಷ ಸೇರಿದಂತೆ ಒಟ್ಟು 39 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.