ADVERTISEMENT

ಆಮ್ಲಜನಕ ಸಿಲಿಂಡರ್‌ ಹಿಡಿದು ಓಡಾಡಿದ ರೋಗಿಯ ಸಂಬಂಧಿಕರು!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಆಮ್ಲಜನಕದ ಸಿಲಿಂಡರ್‌ ಹೊತ್ತುಕೊಂಡು ಬರುತ್ತಿರುವ ಮಗುವಿನ ಸಂಬಂಧಿಕರು
ಆಮ್ಲಜನಕದ ಸಿಲಿಂಡರ್‌ ಹೊತ್ತುಕೊಂಡು ಬರುತ್ತಿರುವ ಮಗುವಿನ ಸಂಬಂಧಿಕರು   

ಹುಬ್ಬಳ್ಳಿ: ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಶನಿವಾರ ಮಗುವಿನ ಸಂಬಂಧಿಕರು ಮಗುವಿನೊಂದಿಗೆ ಆಮ್ಲಜನಕದ ಸಿಲಿಂಡರ್‌ ಹಿಡಿದು ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

ಕಿಮ್ಸ್‌ನ ಚಿಕ್ಕ ಮಕ್ಕಳ ವಿಭಾಗದಲ್ಲಿ ಗೌತಮಿ ನಿಂಗಪ್ಪ ಸರ್ಪಣ್ಣವರ ಎಂಬ ಎರಡು ವರ್ಷದ ಮಗುವನ್ನು ದಾಖಲಿಸಲಾಗಿದೆ. ಸ್ಕ್ಯಾನಿಂಗ್‌ಗೆ ಮಗುವನ್ನು ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದಾರೆ. ಉಸಿರಾಟದ ತೊಂದರೆ ಇದ್ದರಿಂದ ಗೌತಮಿಗೆ ಸಿಲಿಂಡರ್ ಮೂಲಕ ಆಮ್ಲಜನಕ  ಪೂರೈಸಲಾಗುತ್ತಿತ್ತು. ಸಿಲಿಂಡರ್‌ ಸಮೇತ ಮಗುವನ್ನು ಗೌತಮಿ ಸಂಬಂಧಿಕರು ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋದರು.

‘ಸಿಲಿಂಡರ್‌ ಹೊತ್ತೊಯ್ಯಲು ರೋಗಿಯ ಸಂಬಂಧಿಕರಿಗೆ ಸಿಬ್ಬಂದಿ ಹೇಳುತ್ತಿದ್ದಾರೆ. ನಾವೇನು ಮೂರು– ನಾಲ್ಕು ಜನ ಬಂದಿದ್ದೇವೆ. ಒಬ್ಬೊಬ್ಬರೇ ಇದ್ದಾಗ ಹೀಗೆ ಹೇಳಿದರೆ, ಅದನ್ನು ಹೊತ್ತೊಯ್ಯಲು ಸಾಧ್ಯವಾಗುತ್ತದೆಯೇ’ ಎಂದು ರೋಗಿಯ ಪರಿಚಿತರಾದ ಶಿವನಗೌಡರ ಪ್ರಶ್ನಿಸಿದರು.

ADVERTISEMENT

‘ನಾವು ಸವದತ್ತಿ ತಾಲ್ಲೂಕಿನ ಹೂಲಿಯವರು. ಮಗಳು– ಅಳಿಯ ನರಗುಂದದಲ್ಲಿರುತ್ತಾರೆ. ಮೊಮ್ಮಗಳು ಜ್ವರ ಬಂದಿತ್ತು. ಕಿಮ್ಸ್‌ಗೆ ದಾಖಲಿಸಿ ಮೂರು ದಿನವಾಯಿತು. ಸ್ಕ್ಯಾನ್‌ ಮಾಡಿಸಬೇಕು ಎಂದು ವೈದ್ಯರು ಹೇಳಿದ್ದರಿಂದ ಸಿಲಿಂಡರ್‌  ಜೊತೆಗೇ ಮಗುವನ್ನು ತೆಗೆದುಕೊಂಡು ಬಂದಿದ್ದೇವೆ’ ಎಂದು ಮಗುವಿನ ಅಜ್ಜ ಹೊನ್ನಪ್ಪ ಸರ್ಪಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ರೋಗಿಯ ಸಂಬಂಧಿಕರಿಗೆ ಆಮ್ಲಜನಕದ ಸಿಲಿಂಡರ್‌ ತೆಗೆದುಕೊಂಡು ಹೋಗಲು ಹೇಳಿದ್ದೇವೆ. ರೋಗಿಯ ಜೊತೆಗೆ ಐದಾರು ಜನ ಇದ್ದುದರಿಂದ ಹೇಳಲಾಗಿದೆ. ಬೇಗ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯಕೀಯ ಸಿಬ್ಬಂದಿ ಹೀಗೆ ಮಾಡಿದ್ದಾರೆ’ ಎಂದು ಕಿಮ್ಸ್‌ ನಿರ್ದೇಶಕರ ಡಾ. ದತ್ತಾತ್ರೇಯ ಬಂಟ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.