ADVERTISEMENT

ಆರತಿ ರಾವ್ ವಿರುದ್ಧ ತನಿಖೆಗೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಬೆಂಗಳೂರು: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಅವರ ಮಾಜಿ ಶಿಷ್ಯೆ ಆರತಿ ರಾವ್ ಅವರ ವಿರುದ್ಧ ರಾಮನಗರದ ಜೆಎಂಎಫ್ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆಗೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಿತ್ರನಟಿ ರಂಜಿತಾ ಅವರು ತಮ್ಮ ವಿರುದ್ಧ ನೀಡಿರುವ ಖಾಸಗಿ ದೂರನ್ನು ರದ್ದು ಮಾಡಬೇಕು ಎಂದು ಕೋರಿ ಆರತಿ ಅವರು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆರತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಎಸ್. ನಾಗಮೋಹನ ದಾಸ ಅವರು, ತಡೆಯಾಜ್ಞೆ ನೀಡಿ ಬುಧವಾರ ಆದೇಶಿಸಿದರು.

`ನಿತ್ಯಾನಂದ ಸ್ವಾಮೀಜಿಯ ರಾಸಲೀಲೆ ಸಿ.ಡಿ.ಯನ್ನು ಆರತಿ ಅವರೇ ಬಹಿರಂಗ ಮಾಡಿದ್ದಾರೆ. ನಾನು ಆರತಿ ಅವರಿಗೆ ಹಣ ಕೊಡಲು ನಿರಾಕರಿಸಿದ ಕಾರಣ ಅವರು ಸುಳ್ಳು ಸಿ.ಡಿ. ಬಹಿರಂಗ ಮಾಡಿದ್ದಾರೆ~ ಎಂದು ಆರೋಪಿಸಿ ರಂಜಿತಾ ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ವಿಚಾರಣೆ ನಡೆಸಿದ ಜೆಎಂಎಫ್ ನ್ಯಾಯಾಲಯ, ಸೂಕ್ತ ತನಿಖೆ ನಡೆಸುವಂತೆ ಬಿಡದಿಯ ಪೊಲೀಸರಿಗೆ ಆದೇಶಿಸಿತ್ತು. ಆರತಿ ಅವರ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನೂ (ಎಫ್‌ಐಆರ್) ದಾಖಲಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.