ADVERTISEMENT

ಆರ್ಯ ಈಡಿಗ ವಿದ್ಯಾರ್ಥಿ ನಿಲಯಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST
ಆರ್ಯ ಈಡಿಗ ವಿದ್ಯಾರ್ಥಿ ನಿಲಯಕ್ಕೆ ನೆರವು
ಆರ್ಯ ಈಡಿಗ ವಿದ್ಯಾರ್ಥಿ ನಿಲಯಕ್ಕೆ ನೆರವು   

ಧಾರವಾಡ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಹಾಗೂ ಸಂಘದ ಧಾರವಾಡ ಜಿಲ್ಲಾ ಘಟಕ ಸತ್ತೂರಿನ ಉದಯಗಿರಿಯಲ್ಲಿರುವ ಕೆ.ಎಚ್.ಬಿ. ಲೇಔಟ್‌ನಲ್ಲಿ ಅಂದಾಜು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಿರುವ ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.ರಾಮನಗರ ಜಿಲ್ಲೆ ಸೋಲೂರಿನ ನಾರಾಯಣ ಗುರುಮಠದ ಆರ್ಯಶ್ರೀ ರೇಣುಕಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಚಿವ ಜಗದೀಶ ಶೆಟ್ಟರ ಶಿಲಾನ್ಯಾಸ ನೆರವೇರಿಸಿದರು.

ನಂತರ ನಡೆದ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಹಣಕಾಸಿನ ನೆರವು ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ದಾನಿಗಳಿಂದ ಹಣ ಸಂಗ್ರಹಿಸುವ ಕೆಲಸವನ್ನು ಮಾಡಲಾಗಿದ್ದು ಎರಡು ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನೂ ಎಂಟು ಕೋಟಿ ರೂಪಾಯಿಗಳನ್ನು ಹೊಂದಿಸಬೇಕಾಗಿದೆ. ಸರ್ಕಾರ ಈ ಬಗ್ಗೆ ಗಮನ ಹಿರಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಧಾರವಾಡ ಘಟಕದ ಅಧ್ಯಕ್ಷ ಚಂದ್ರಶೇಖರ ಆರ್. ಢವಳಗಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ಸಂಘದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೆರವು ಒದಗಿಸಲು ಮುಂದಾಗುವುದಾಗಿ ತಿಳಿಸಿದರು.ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ, ಆರ್ಯ ಈಡಿಗ ಸಮಾಜದಲ್ಲಿ ಎರಡನೇ ತಲೆಮಾರಿನ ಮುಖಂಡರನ್ನು ಬೆಳೆಸುವ ಅಗತ್ಯವಿದ್ದು ಈ ಬಗ್ಗೆ ಹಿರಿಯರು ಗಮನ ಹರಿಸಬೇಕು ಎಂದು ಹೇಳಿದರು.

ಕೋಟಿ-ಚೆನ್ನಯ್ಯ ಸ್ಮಾರಕಕ್ಕೆ ಸರ್ಕಾರ ಅಗತ್ಯ ನೆರವು ನೀಡಲು ಮುಂದಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ ಮಾತನಾಡಿ, ಎಲ್ಲ ಜಿಲ್ಲೆಗಳಲ್ಲಿ ಆರ್ಯ ಈಡಿಗರ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ. ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ನಾರಾಯಣ ಸಾ ಭಾಂಡಗೆ, ಹೈದರಾಬಾದ್‌ನ ವೈದ್ಯ ಡಾ. ಶಿವಕುಮಾರ ಅಳ್ಳೆ ಮರಿಯಪ್ಪ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಧಾರವಾಡ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವಾನಂದ ಎಚ್. ಈಳಿಗೇರ, ಪ್ರಧಾನ ಕಾರ್ಯದರ್ಶಿಗಳಾದ ಎನ್.ಸಿ. ಈಳಿಗೇರ, ಎಸ್.ಜೆ. ಕಾಳೇಗೌಡ, ಉಪಾಧ್ಯಕ್ಷರಾದ ಎಂ. ತಿಮ್ಮೇಗೌಡ, ಜಿ.ಕೆ. ಓಬಯ್ಯ, ಎನ್. ಉದಯ ಮುಂತಾದವರು ಉಪಸ್ಥಿತರಿದ್ದರು. ಜಿ.ಕೆ. ಗಣಪತಿ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪ್ರಾರ್ಥಿಸಿದರು. ಖ್ಯಾತ ಕಲಾವಿದೆ ಬೆಂಗಳೂರಿನ ಪೂಜಾಶ್ರೀ ಎನ್. ಈಳಿಗೇರ ಭರತನಾಟ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.