ADVERTISEMENT

ಇಂಗ್ಲಿಷ್ ಸೊಕ್ಕು, ಕನ್ನಡದ ಕೀಳರಿಮೆ- ಚಂದ್ರಶೇಖರ ಕಂಬಾರ ಕಳವಳ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಶ್ರೀಮಂತರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಿ ಆಧುನಿಕತೆಯ ಸೊಕ್ಕು ಬೆಳೆಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ. ಒಂದೇ ನಾಡಿನಲ್ಲಿ ಎರಡು ರೀತಿಯ ನಾಗರಿಕರನ್ನು ಬೆಳೆಸುತ್ತಿದ್ದೇವೆ. ಇದು ಸರಿಯಾ? ನಮಗೆ ನಾಚಿಕೆಯೂ ಆಗುತ್ತಿಲ್ಲವಾ?~

- ಈ ಖಡಕ್ ಪ್ರಶ್ನೆಗಳನ್ನು ಕೇಳಿದವರು ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವ ಸಾಹಿತಿ ಡಾ. ಚಂದ್ರಶೇಖರ ಕಂಬಾರರು. ಬೆಂಗಳೂರು ಪ್ರೆಸ್ ಕ್ಲಬ್ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಕಂಬಾರರು, `ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿ ನಮ್ಮ ಮಕ್ಕಳನ್ನು ಪರಕೀಯರನ್ನಾಗಿಸುವುದು ಬೇಡ. ಅವರಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಿ ಸ್ವಕೀಯರನ್ನಾಗಿಸೋಣ~ ಎಂದರು.

`ರಾಜ್ಯದಲ್ಲಿ ಒಂದರಿಂದ ಹತ್ತನೆಯ ತರಗತಿವರೆಗಿನ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿ. ಹತ್ತನೇ ತರಗತಿವರೆಗೆ ಕನ್ನಡವೇ ಶಿಕ್ಷಣ ಮಾಧ್ಯಮವಾಗಲಿ. ಕನ್ನಡದ ಮೂಲಕ ಇಂಗ್ಲಿಷ್ ಬೋಧನೆ ನಡೆಯಲಿ. ಪಿಯುಸಿ ಮತ್ತು ನಂತರದ ಶಿಕ್ಷಣವನ್ನು ಬೇಕಿದ್ದರೆ ಖಾಸಗಿಯವರಿಗೆ ನೀಡಲಿ~ ಎಂದರು.

ಕಂಬಾರರು ಹೇಳಿದ್ದು...
ಸಂವಾದದಲ್ಲಿ ಕಂಬಾರರು ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದರು. `ನಿಮಗೆ ಅತ್ಯಂತ ಸಂತಸ ತಂದಿದ್ದು ಯಾವುದು?~ ಎಂದು ಕೇಳಿದಾಗ, `ಈಗ ದೊರೆತಿರುವ ಪ್ರಶಸ್ತಿ~ ಎಂದು ಮುಗುಳ್ನಕ್ಕರು.

`ಇದಲ್ಲದೆ ಬೇರೆ ಯಾವುದಾದರೂ ಪ್ರಶಸ್ತಿ?~ ಎಂದು ಕೇಳಿದಾಗ, `ಗೋಪಾಲಕೃಷ್ಣ ಅಡಿಗರಿಗೆ ಲಭಿಸಿದ್ದ ಕಬೀರ್ ಸಮ್ಮಾನ್ ನನಗೂ ದೊರೆತಾಗ ತುಂಬ ಸಂತಸವಾಗಿತ್ತು~ ಎಂದರು.

ಅವರು ಸಂವಾದದಲ್ಲಿ ಹೇಳಿದ ಕೆಲವು ಮಾತುಗಳ ಝಲಕ್ ಇಲ್ಲಿದೆ.

 ಬ್ರಾಹ್ಮಣ - ದಲಿತ ಎನ್ನದೆ ಉತ್ತರ ಕರ್ನಾಟಕದ ಅಸಂಖ್ಯ ಜನರಿಗೆ ಅಲ್ಲಿನ ಮಠಗಳು ಶಿಕ್ಷಣ ನೀಡಿವೆ.

 ಇಂದಿನ ಯುವಕರಲ್ಲಿ ಜಾತಿಯನ್ನು ಮೀರುವ ಪ್ರಜ್ಞೆ ಮೂಡುತ್ತಿದೆ.

ವೇದಗಳಿಗೆ ಅವುಗಳಲ್ಲಿರುವ ಲಯ ಸೌಂದರ್ಯ ತಂದುಕೊಟ್ಟಿದೆ.

 ಯಕ್ಷಗಾನವೆಂಬ ಕಲೆಯೇ ಒಂದು ದೊಡ್ಡ ಪವಾಡ!

 ಕನ್ನಡದ ಕೃತಿಗಳು ಇಂಗ್ಲಿಷಿಗೆ ಅನುವಾದ ಆಗದಿದ್ದರೆ ನಾವೇಕೆ ಅಳಬೇಕು? ನಮಗೂ ಸ್ವಲ್ಪ ಸೊಕ್ಕು ಇರಬೇಕು!

 ಕೆಟ್ಟ ಅಭಿರುಚಿಯ ಚಲನಚಿತ್ರಗಳ ವಿರುದ್ಧ ಜನರೇ ಪ್ರತಿಭಟಿಸಬೇಕು.

 ಕವಿ-ಕಲಾವಿದನ ಪಟ್ಟವನ್ನು ಹಕ್ಕಿನ ನೆಲೆಯಲ್ಲಿ ಪಡೆಯಲಾಗದು.

 ನಮ್ಮ ಗ್ರಾಮ ಸಂಸ್ಕೃತಿಯ ಸ್ಥಿತಿ ಕುರಿತು ಯೋಚಿಸಿದರೆ ದುಃಖವಾಗುತ್ತದೆ.


`ವಿದ್ಯೆಗಾಗಿ ಕನ್ನಡ~: ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಕನ್ನಡದ ಮೂಲಕವೇ ಶಿಕ್ಷಣ ನೀಡಬೇಕು. ಬಡವರು ಇಂಗ್ಲಿಷ್ ಕಲಿತು ಅವಕಾಶಗಳನ್ನು ಉಪಯೋಗಿಸಿಕೊಳ್ಳಬಾರದು ಎಂದು ಹೇಳುತ್ತಿಲ್ಲ. ಆದರೆ ಕಲಿಕೆ ಕನ್ನಡದ ಮೂಲಕ ಆಗಬೇಕು. ನೌಕರಿ ಸಿಗುತ್ತದೆ ಎಂದಾದರೆ ಚೀನಿ ಭಾಷೆಯನ್ನೂ ಕಲಿಸಲಿ, ವಿರೋಧವಿಲ್ಲ ಎಂದರು.
ದೇಶದಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾದ ನಂತರವೂ ಆಯಾ ರಾಜ್ಯಗಳಲ್ಲಿ ಅಲ್ಲಿನ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬಾರದು ಎನ್ನುವುದು ಸರಿಯಲ್ಲ ಎಂದರು.

`ಎಂಟು ಸಾವಿರ ಶ್ಲೋಕಗಳಿದ್ದ ಮೂಲ ಮಹಾಭಾರತವನ್ನು ಲಕ್ಷ ಶ್ಲೋಕಗಳ ಮಹಾಕಾವ್ಯವಾಗಿಸುವ ಸೃಜನಶೀಲತೆ ಇದ್ದ ನಮ್ಮ ನಾಡು ಬ್ರಿಟಿಷರು ಬಂದ ನಂತರ ವಿಸ್ಮೃತಿಗೆ ಒಳಗಾಯಿತು. ಈ ವಿಸ್ಮೃತಿಯ ಕಾರಣದಿಂದ ಇಂಗ್ಲಿಷ್ ಭಾಷೆಗೆ ಜೋತುಬಿದ್ದೆವು. ಆಗ ನಾವು ತ್ಯಾಗಮಾಡಿದ ಸೃಜನಶೀಲತೆಯನ್ನು ಮರಳಿ ಪಡೆಯಬೇಕಾದ ಅಗತ್ಯವಿದೆ~ ಎಂದರು.

`ನಾನು ಸೋತಿದ್ದೇನೆ!~: `ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅಳವಡಿಸುವಲ್ಲಿ ನಾನು ಸೋತಿದ್ದೇನೆ~ ಎಂದ ಕಂಬಾರರು, `ಈ ವಿಚಾರವಾಗಿ ನಾನು ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ 16 ಸಚಿವರನ್ನು ಭೇಟಿ ಮಾಡಿದ್ದೆವು. ಆದರೆ ಅವರು ನಮ್ಮನ್ನು ಕಂಬಳದ ಕೋಣಗಳಂತೆ ನೋಡಿದರು~ ಎಂದು ವಿಷಾದದ ನಗೆಚೆಲ್ಲಿದರು.

ಆದರೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಳ್ಳೆಯ ಸ್ಪಂದನೆ ತೋರಿದ್ದರು, ಈ ವಿಷಯದ ಕುರಿತು ಒಂದು ಸಮಿತಿಯನ್ನೂ ನೇಮಕ ಮಾಡಿದ್ದರು. ಈಗ ಆ ಸಮಿತಿಯ ವರದಿ ಎಲ್ಲೋ ಬಿದ್ದಿದೆ. ತಮಿಳು ತಂತ್ರಾಂಶಗಳ ಅಭಿವೃದ್ಧಿ ಬಗ್ಗೆ ವಿಶ್ವ ತಮಿಳು ಸಮ್ಮೇಳನದಲ್ಲಿ 138 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಅವನ್ನೆಲ್ಲ ಕಾರ್ಯರೂಪಕ್ಕೆ ತರುವ ಘೋಷಣೆಯೂ ಅಲ್ಲಿನ ಮುಖ್ಯಮಂತ್ರಿಗಳಿಂದ ಆಯಿತು. ಅವರು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡಿಗರಿಗಿಂತ 15 ವರ್ಷ ಮುಂದಿದ್ದಾರೆ ಎಂದರು.

 `ನಾನು ಸಮುದಾಯದ ಕವಿ. ಅವರ ಭಾಷೆ, ಅವರ ಅಗತ್ಯಗಳು ನನ್ನವೂ ಹೌದು. ಹಾಗಾಗಿ ನನಗೆ ಯಾವುದೇ ಇಸಂಗಳ ಅಗತ್ಯ ಕಾಣಲಿಲ್ಲ~ ಎಂದು ಉತ್ತರಿಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.