ADVERTISEMENT

ಇಂದು ಜೆಡಿಎಸ್ ಮತ್ತೊಂದು ಪಟ್ಟಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗುವುದು. ಪಕ್ಷದ ಪ್ರಣಾಳಿಕೆ ಕೂಡ ಅದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಅವರನ್ನು ಶುಕ್ರವಾರ ಪಕ್ಷದ ಕಚೇರಿಯಲ್ಲಿ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು. ಬಾಕಿ ಇರುವ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರವೇ ಪ್ರಕಟಿಸಲಾಗುವುದು ಎಂದು ಹೇಳಿದರು.

ಎರಡು ಪ್ರಣಾಳಿಕೆ: ಪಕ್ಷವು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕವಾದ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಿದೆ. ನಗರ ಪ್ರದೇಶದ ಮತದಾರರಿಗಾಗಿ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ತ್ಯಾಜ್ಯ ವಿಲೇವಾರಿ, ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಂಚಾರ ದಟ್ಟಣೆ ನಿರ್ವಹಣೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಕ್ಷಣೆ ಒದಗಿಸುವ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶಕ್ಕಾಗಿ ರೂಪಿಸಿರುವ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ರೈತರ ಕೃಷಿ ಸಾಲ ಮನ್ನಾ, ಭಾಗ್ಯಲಕ್ಷ್ಮಿ ಯೋಜನೆಯ ಪುನರ್‌ರಚನೆ ಮತ್ತಿತರ ವಿಷಯಗಳಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕಿತ್ತೂರಿನಿಂದ ಸ್ಪರ್ಧೆ?:ಶುಕ್ರವಾರ ಪಕ್ಷಕ್ಕೆ ಸೇರಿದ ಅಪ್ಪುಗೋಳ್ ಈವರೆಗೂ ಕಾಂಗ್ರೆಸ್ ಪಕ್ಷದಲ್ಲಿದ್ದರು. ದರ್ಶನ್ ಅಭಿನಯದ `ಸಂಗೊಳ್ಳಿ ರಾಯಣ್ಣ' ಸಿನಿಮಾ ನಿರ್ಮಾಣದ ಬಳಿಕ ಅವರು ರಾಜಕೀಯದತ್ತ ಆಸಕ್ತಿ ತಳೆದಿದ್ದರು. ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಬಲ ಲಾಬಿಯನ್ನೂ ನಡೆಸಿದ್ದರು. ಆದರೆ, ಮಾಜಿ ಸಚಿವ ಡಿ.ಬಿ.ಇನಾಂದಾರ್ ಅವರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಪ್ರಕಟಿಸಿತ್ತು.

ಟಿಕೆಟ್ ವಂಚಿತರಾದ ಬಳಿಕ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಅಪ್ಪುಗೋಳ್, ಜೆಡಿಎಸ್ ನಾಯಕರನ್ನು ಸಂಪರ್ಕಿಸಿದ್ದರು. ಶುಕ್ರವಾರ ಪಕ್ಷ ಸೇರಿರುವ ಅವರಿಗೆ ಕಿತ್ತೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.