ADVERTISEMENT

ಇಂಧನ ಕೊರತೆಗೆ ಮುಖ್ಯ ಕಾರಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಭಾರತದಲ್ಲಿ ಇಂಧನ ಕೊರತೆ ಎದುರಾಗಿದ್ದರೆ ಅದಕ್ಕೆ ಸರ್ಕಾರದ ಕೆಲವು ನಿರ್ಲಕ್ಷ್ಯ ಧೋರಣೆಗಳು ಕಾರಣ~ ಎಂದು ಅವೆುರಿಕದ ಬ್ರೂಕಿಂಗ್ಸ್ ಸಂಸ್ಥೆಯ ಇಂಧನ ಭದ್ರತೆ ವಿಭಾಗದ ನಿರ್ದೇಶಕ ಡಾ. ಚಾರ್ಲ್ಸ್ ಕೆ. ಎಬಿಂಗರ್ ಅಭಿಪ್ರಾಯಪಟ್ಟರು.

ಟೆರಿ ಅಂಗಸಂಸ್ಥೆಯಾದ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ದಕ್ಷಿಣ ಏಷ್ಯಾದಲ್ಲಿ ಇಂಧನ ಮತ್ತು ಭದ್ರತೆ~ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಮ್ಯಾನ್ಮಾರ್, ತನ್ನಲ್ಲಿರುವ ಅನಿಲ ಇಂಧನ ಸಂಪನ್ಮೂಲವನ್ನು ಬಳಸಿಕೊಳ್ಳುವಂತೆ ಅನೇಕ ವರ್ಷಗಳ ಹಿಂದೆಯೇ ಭಾರತಕ್ಕೆ ಆಹ್ವಾನ ನೀಡಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಮಹತ್ವದ ಅವಕಾಶ ಕೈತಪ್ಪಿ ಹೋಯಿತು. ಬದಲಿಗೆ ಚೀನಾ ಮ್ಯಾನ್ಮಾರ್‌ನಲ್ಲಿ ಸಕ್ರಿಯವಾಯಿತು~ ಎಂದರು.

`ದೇಶದ ಥಾರ್ ಮರುಭೂಮಿ ಹಾಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಅಪಾರ ಕಲ್ಲಿದ್ದಲು ನಿಕ್ಷೇಪವಿದೆ. ಗಡಿಯಾಚೆಗಿನ ಸಂಘರ್ಷದಿಂದಾಗಿ ಥಾರ್‌ನಲ್ಲಿರುವ ಕಲ್ಲಿದ್ದಲನ್ನು ಸದುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಆದರೆ ಪಾಕಿಸ್ತಾನದ ಸಿಂಧ್ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲಿದ್ದಲು ಉತ್ಖನನಕ್ಕಾಗಿ ಚೀನಾದ ಸುಮಾರು 23 ಸಾವಿರ ನೌಕರರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ~ ಎಂದು ತಿಳಿಸಿದರು.

`ನೇಪಾಳದಲ್ಲಿ ರಾಜಕೀಯ ಅರಾಜಕತೆಯಿಂದಾಗಿ ಸದ್ಯಕ್ಕೆ ಪ್ರಜಾಪ್ರಭುತ್ವ ನೆಲೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ಅಪಾರ ಜಲಸಂಪನ್ಮೂಲವಿದ್ದರೂ ಜಲವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಅಂದಾಜು ಸುಮಾರು 83 ಸಾವಿರ ಮೆಗಾ ವಾಟ್‌ನಷ್ಟು ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ನೇಪಾಳಕ್ಕಿದೆ. ತಕ್ಷಣಕ್ಕೆ ಅಣೆಕಟ್ಟುಗಳ ನಿರ್ಮಾಣದಲ್ಲಿ ತೊಡಗಿದರೂ ಅದು 43 ಸಾವಿರ ಮೆಗಾ ವಾಟ್‌ನಷ್ಟು ವಿದ್ಯುತ್ತನ್ನು ನಿರಾತಂಕವಾಗಿ ಉತ್ಪಾದಿಸಬಹುದು~ ಎಂದರು.  

`ಇಂಧನ ಭದ್ರತೆ ನಿರಾತಂಕವಾಗಬೇಕಿದ್ದರೆ ಅದರ ಬೆಲೆ ನಿಗದಿ ಪ್ರಕ್ರಿಯೆ ಸಮರ್ಪಕವಾಗಿರಬೇಕು. ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವ ವ್ಯವಸ್ಥೆ ಸಮರ್ಥ ರೀತಿಯಲ್ಲಿ ಜಾರಿಯಾಗಬೇಕು. ವಿದ್ಯುತ್ ಸರಬರಾಜು ಕ್ಷೇತ್ರದಲ್ಲಿ ಪ್ರತಿ ರಾಜ್ಯಗಳಲ್ಲಿ ಭಿನ್ನರೀತಿಯ ಸೇವಾಶುಲ್ಕ ವಿಧಿಸಲಾಗುತ್ತಿದೆ. ಇದು ತಪ್ಪಬೇಕು. ಏಕರೂಪದ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವಕ್ಕೆ ಬರಬೇಕು ಎಂದರು.

`ಅಣು ವಿದ್ಯುತ್ ಬಳಸಲು ನನ್ನ ವಿರೋಧವಿಲ್ಲ. ಆದರೆ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಉಂಟಾದ ಫುಕುಶಿಮಾ ಅಣು ವಿಕಿರಣ ಸೋರಿಕೆಯಂತಹ ಪ್ರಕರಣಗಳನ್ನು ಗಮನಿಸುವುದು ಅಗತ್ಯ. ಜರ್ಮನಿ ತನ್ನೆಲ್ಲಾ ಅಣು ರಿಯಾಕ್ಟರ್‌ಗಳನ್ನು ಮುಚ್ಚಲು ನಿರ್ಧರಿಸಿದೆ.

ಇಟಲಿ, ಸ್ವಿಜರ್‌ಲೆಂಡ್, ಡೆನ್ಮಾರ್ಕ್, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ದೇಶಗಳೂ ಕೂಡ ಇದೇ ಹಾದಿಯಲ್ಲಿದೆ. ಅಮೆರಿಕ ಹೊಸ ರಿಯಾಕ್ಟರ್‌ಗಳನ್ನು ಸ್ಥಾಪಿಸದೇ ಇರಲು ತೀರ್ಮಾನಿಸಿದೆ. ಆದ್ದರಿಂದ ಅಸಾಂಪ್ರದಾಯಿಕ ಇಂಧನಗಳತ್ತ ಗಮನ ಹರಿಸುವುದು ಮುಖ್ಯ~ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಅಸಾಂಪ್ರದಾಯಿಕ ಇಂಧನ ಮೂಲಗಳ ಸಚಿವಾಲಯದ ಮಾಜಿ ಸಲಹೆಗಾರ ಡಾ.ಜೆ.ಗುರುರಾಜ, ಕೇಂದ್ರದ ನಿರ್ದೇಶಕ ಪಿ.ಆರ್.ದಾಸ್‌ಗುಪ್ತ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.