ಬೆಂಗಳೂರು: ‘ಜನರಿಗೆ ಇತಿಹಾಸದ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ವಿವಿಧ ರಾಜಮನೆತನಗಳ ಕಾಲದ ಸಮಾಜ ಮತ್ತು ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರಗಳನ್ನು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಪ್ರದರ್ಶನವನ್ನು ವಿವಿಧೆಡೆ ಹಮ್ಮಿಕೊಳ್ಳುವ ಯೋಜನೆಯಿದೆ’ ಎಂದು ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ.ಸವ್ಯಸಾಚಿ ಭಟ್ಟಾಚಾರ್ಯ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ‘ವಿಜಯನಗರ ಸಾಮ್ರಾಜ್ಯ ಕಾಲದ ಸಮಾಜ ಮತ್ತು ಸಂಸ್ಕೃತಿ’ ಛಾಯಾಚಿತ್ರ ಹಾಗೂ ರೇಖಾಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಹುಸಂಸ್ಕೃತಿ ಬಿಂಬಿಸುವ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯ, ಬಹುಮನಿ ಸುಲ್ತಾನರು ಮತ್ತು ವಿಜಾಪುರದ ಆದಿಲ್‌ಷಾಹಿ ದೊರೆಗಳ ಕಾಲದ ಸಾಮಾಜಿಕ, ಸಾಂಸ್ಕೃತಿಕ ಪರಿಕರಗಳ ಛಾಯಾಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ’ ಎಂದರು.
‘ಬರುವ ಜನವರಿ ತಿಂಗಳಲ್ಲಿ ‘ವಸಾಹತೀಕರಣದ ವಿರುದ್ಧ ಬಂಡಾಯ’ ಎಂಬ ಶೀರ್ಷಿಕೆಯಲ್ಲಿ ಹಲವಾರು ಬಂಡಾಯಗಾರರ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಸುವ ನಿರ್ಧಾರಕ್ಕೆ ಬರಲಾಗಿದೆ. ವಿದೇಶಗಳಲ್ಲಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ಅಧ್ಯಯನ ಕೈಗೊಳ್ಳಲಿರುವ ಯುವ ಸಂಶೋಧಕರಿಗೆ ಫೆಲೋಶಿಪ್ ನೀಡಲು ನಿರ್ಧರಿಸಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದರು.
‘ದೇಶದ ವಿವಿಧೆಡೆ ತೆರಳಿ ಇತಿಹಾಸ ಅಧ್ಯಯನ ಕೈಗೊಳ್ಳಲಿರುವವರಿಗಾಗಿ ಪ್ರಸ್ತುತ ರೂ 5000 (ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಪಾಸು ಮಾಡದವರಿಗೆ) ಫೆಲೋಶಿಪ್ ನೀಡಲಾಗುತ್ತಿದೆ. ನೆಟ್ ಪಾಸಾದವರಿಗೆ ರೂ 6000 ನೀಡುತ್ತಿದ್ದು, ಆ ಮೊತ್ತವನ್ನು ರೂ 16,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು. ಸದಸ್ಯ ಕಾರ್ಯದರ್ಶಿ ಇಶ್ರಾತ್ ಆಲಮ್ ಮಾತನಾಡಿ, ‘ಸಂಸ್ಥೆಯು ಪ್ರಕಟಿಸುವ ಜರ್ನಲ್ ಹಾಗೂ ಇತರ ಕೃತಿಗಳನ್ನು ತಾವಿದ್ದಲ್ಲಿಂದಲೇ ಪಡೆಯಲು ಅನುವಾಗುವಂತೆ ಆನ್‌ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು.
ದಕ್ಷಿಣ ಪ್ರಾದೇಶಿಕ ಶಾಖೆಯ ಉಪ ನಿರ್ದೇಶಕ ಡಾ.ಎಸ್.ಕೆ.ಅರುಣಿ ಮಾತನಾಡಿ, ‘ಬೆಂಗಳೂರಿನಲ್ಲಿ ಈ ಪ್ರದರ್ಶನ ಮಾರ್ಚ್ 10ರವರೆಗೆ ನಡೆಯಲಿದೆ. ಬಹುಮನಿ ಸುಲ್ತಾನರು ಹಾಗೂ ವಿಜಾಪುರದ ಆದಿಲ್‌ಷಾಹಿಗಳು ಆಳ್ವಿಕೆ ನಡೆಸಿದ ಗುಲ್ಬರ್ಗ, ವಿಜಾಪುರ ಜಿಲ್ಲೆಗಳಲ್ಲಿ ಈ ಪ್ರದರ್ಶನ ಏರ್ಪಡಿಸಲಾಗುವುದು’ ಎಂದು ಹೇಳಿದರು. ಸಂಸ್ಥೆಯ ಪರಿಶೀಲನಾ ಸಮಿತಿ ಸದಸ್ಯ ಡಾ.ಬಕ್ಷಿ ಪ್ರದರ್ಶನ ಉದ್ಘಾಟಿಸಿದರು.
125 ಛಾಯಾ ಹಾಗೂ ರೇಖಾ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಪ್ರದರ್ಶನ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಾರ್ವಜನಿಕರ ಭೇಟಿಗೆ ಮುಕ್ತವಾಗಿರುತ್ತದೆ. ಸ್ಥಳ: ಐಸಿಎಚ್‌ಆರ್ ಕೇಂದ್ರ, ಅರಮನೆ ರಸ್ತೆ (ಮೈಸೂರು ಬ್ಯಾಂಕ್ ವೃತ್ತ). ದೂರವಾಣಿ-22286733.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.