ADVERTISEMENT

‘ಇದು ಪರ್ಸೆಂಟೇಜ್‌ ಸರ್ಕಾರ‘: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 11:09 IST
Last Updated 28 ಫೆಬ್ರುವರಿ 2018, 11:09 IST
‘ಇದು ಪರ್ಸೆಂಟೇಜ್‌ ಸರ್ಕಾರ‘: ಸಿ.ಟಿ. ರವಿ
‘ಇದು ಪರ್ಸೆಂಟೇಜ್‌ ಸರ್ಕಾರ‘: ಸಿ.ಟಿ. ರವಿ   

ರಾಯಚೂರು: ‘ಕದ್ದು ಮುಚ್ಚಿ ನಡೆಯುತ್ತಿದ್ದ ಪರ್ಸೆಂಟೇಜ್‌ ಆಡಳಿತವನ್ನು ಕಾಂಗ್ರೆಸ್‌ ಸರ್ಕಾರ ಬಹಿರಂಗವಾಗಿ ’ ರಾಜಾರೋಷದಿಂದ ಮಾಡುತ್ತಿದೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಸಿ.ಟಿ. ರವಿ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ತೀರ್ಮಾನ ನೀಡಲಿದ್ದಾರೆ. ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆಗಳು, ಅತ್ಯಾಚಾರದಲ್ಲಿ ದೇಶಕ್ಕೆ ರಾಜ್ಯ 2ನೇ ಸ್ಥಾನ, ಅತಿಹೆಚ್ಚು ಸಾಲ ಮಾಡಿದ ಸಿಎಂ, ಬೆಂಗಳೂರು ಮಹಾನಗರದಲ್ಲಿ ಹೆಚ್ಚಿದ ಅಪರಾಧಗಳು, ಮರಳು ಮಾಫಿಯಾ ಬಗ್ಗೆ ಜನರು ಗಮನಿಸಿದ್ದಾರೆ ಎಂದರು.

ಜೆಡಿಎಸ್‌ನಿಂದ ವಲಸೆ ಬಂದಿರುವ ಜಿಲ್ಲೆಯ ಇಬ್ಬರು ಮಾಜಿ ಶಾಸಕರಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈಗಾಗಲೇ ಟಿಕೆಟ್‌ ಘೋಷಿಸಿರುವುದಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ‘ಉತ್ತರ ಪ್ರದೇಶ ಮಾದರಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ಹಂಚಲಾಗುವುದು. ಪಾರ್ಲಿಮೆಂಟರಿ ಟೀಮ್‌ ತೆಗೆದುಕೊಳ್ಳುವ ತೀರ್ಮಾನ ಅಂತಿಮ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಹೇಳಿದ್ದಾರೆ.

ADVERTISEMENT

ಇದರಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ರಾಜ್ಯಾಧ್ಯಕ್ಷರು ರಾಜ್ಯದ ಮಟ್ಟಿಗೆ ಮಾತ್ರ ಸುಪ್ರೀಮ್‌. ಈ ವಿಷಯ ವಿವಾದ ಮಾಡುವುದು ನನಗಿಷ್ಟವಿಲ್ಲ’ ಎಂದು ನುಣಿಚಿಕೊಂಡರು.

ರಾಯಚೂರಿನಲ್ಲಿ ಮಾ. 13 ರಂದು ಆಯೋಜಿಸುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವರು. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಲಕ್ಷಾಂತರ ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಳ್ಳುವರು ಎಂದು ಹೇಳಿದರು. ಶಾಸಕರಾದ ವಿ.ಸೋಮಣ್ಣ, ಶಿವನಗೌಡ ನಾಯಕ, ಮುಖಂಡ ರಾಜುಗೌಡ ನಾಯಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.