ADVERTISEMENT

ಉದ್ಘಾಟನೆಗೆ ಕಾಯುತ್ತಿವೆ 2000 ಆಸರೆ ಮನೆ

ರಾಮರಡ್ಡಿ ಅಳವಂಡಿ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ರಾಯಚೂರು: ನೆರೆ ಹಾವಳಿಗೆ ಜಿಲ್ಲೆಯ ಹಲವು ಕಡೆ ಜನತೆ ಮನೆ ಕಳೆದುಕೊಂಡಾಗ ದಾನಿ ಸಂಸ್ಥೆಗಳಿಗೆ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಮೊರೆ ಹೋಗಿತ್ತು. ಕೆಲ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಮನೆ ನಿರ್ಮಾಣಕ್ಕೆ ಮುಂದಾಗಿದ್ದವು. ಈಗ ದಾನಿ ಸಂಸ್ಥೆಗಳು 2,000ಕ್ಕೂ ಹೆಚ್ಚು ಮನೆ ನಿರ್ಮಿಸಿದ್ದರೂ ಉದ್ಘಾಟನೆಗೆ ಸರ್ಕಾರವೇ ನಿರಾಸಕ್ತಿ ವಹಿಸಿದೆ.

2009ರಲ್ಲಿ ನೆರೆ ಹಾವಳಿ ಬಳಿಕ ಜಿಲ್ಲೆಯ 52 ಗ್ರಾಮಗಳಲ್ಲಿ 12,473 ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. ಇದರಲ್ಲಿ 11,235 ಮನೆ ನಿರ್ಮಾಣ ಕಾಮಗಾರಿಯನ್ನು ಹಂತ ಹಂತವಾಗಿ ವಿವಿಧ ದಾನಿ ಸಂಸ್ಥೆಗಳ ಸಹಕಾರದಲ್ಲಿ ಕೈಗೊಂಡಿತ್ತು. ಸದ್ಯ 10,155 ಮನೆಗಳು ನಿರ್ಮಾಣವಾಗಿವೆ. ಹಲವು ಗ್ರಾಮಗಳಲ್ಲಿ ಸಾಕಷ್ಟು ಮನೆಗಳನ್ನೂ ಹಂಚಿಕೆ ಮಾಡಲಾಗಿದೆ.

ಈ 10,155 ಮನೆಗಳಲ್ಲಿ ಇನ್ನೂ ಸುಮಾರು 2,000 ಕ್ಕೂ ಹೆಚ್ಚು ಮನೆಗಳು ಉದ್ಘಾಟನೆಗೆ ಕಾಯುತ್ತಿವೆ. ನೆರೆ ಸಂತ್ರಸ್ತರು ಹೊಸ ವರ್ಷ, ಸಂಕ್ರಮಣ, ಯುಗಾದಿ ಹೀಗೆ `ಆಸರೆ ಮನೆ~ಪ್ರವೇಶಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ, ಹುಲಗುಂಚಿ, ಹೆಡಗಿನಾಳ ಹಾಗೂ ಹರತನೂರು, ರಾಯಚೂರು ತಾಲ್ಲೂಕಿನ ಕುರವಕುರ್ದಾ, ಡೊಂಗಾರಾಂಪುರ, ಅಗ್ರಹಾರ, ದೇವದುರ್ಗ ತಾಲ್ಲೂಕಿನ ಮದರಕಲ್, ವೀರಗೋಟಾ ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಚೀಕಲಪರ್ವಿ ಗ್ರಾಮ- ಹೀಗೆ ವಿವಿಧೆಡೆ 2000ಕ್ಕೂ ಹೆಚ್ಚು ಮನೆ ನಿರ್ಮಾಣಗೊಂಡಿವೆ.

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ (ಕೆಆರ್‌ಐಡಿಎಲ್), ಹಟ್ಟಿ ಚಿನ್ನದ ಗಣಿ, ಆದಿಚುಂಚನಗಿರಿ ಮಹಾ ಸಂಸ್ಥಾನಮಠ, ಭಾರತ್ ಅರ್ಥ್ ಮೂವರ್ಸ್‌ (ಬಿಇಎಂಎಲ್)-ಕೆಆರ್‌ಐಡಿಎಲ್, ಮಂಗಳೂರು ಮಂಗಳೂರು ರಿಫೈನರೀಸ್ (ಎಂ.ಆರ್.ಪಿ.ಎಲ್.) ಸಂಸ್ಥೆ, ಮಾತಾ ಅಮೃತಾನಂದಮಯಿ ಸಂಸ್ಥೆಗಳು ಈ ಮನೆಗಳನ್ನು ನಿರ್ಮಿಸಿವೆ.

ದಾನಿ ಸಂಸ್ಥೆಗಳ ಅಸಮಾಧಾನ: 2009ರಲ್ಲಿ ಪ್ರವಾಹ ಆದಾಗ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಹಾಗೂ ಸರ್ಕಾರ ಮಾಡಿದ ಮನವಿಗೆ ಸ್ಪಂದಿಸಿದೆವು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಮನೆ ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ಇದ್ದ ಆಸಕ್ತಿ ಸರ್ಕಾರಕ್ಕೆ ಈಗ ಇಲ್ಲ. ಮನೆ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ನಿರಾಸಕ್ತಿ ತೋರಿಸುತ್ತಿದೆ ಎಂಬ ಅಸಮಾಧಾನ ದಾನಿ ಸಂಸ್ಥೆಗಳು ವ್ಯಕ್ತಪಡಿಸಿವೆ ಎಂದು ತಿಳಿದಿದೆ.

2000 ಮನೆ ಉದ್ಘಾಟನೆಗೆ ಸಿದ್ಧಗೊಂಡಿವೆ. ಸರ್ಕಾರದ ಆದೇಶದ ಪ್ರಕಾರ ಈ ಮನೆಗಳ ಉದ್ಘಾಟನೆ ಮಾಡುವ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಸಕರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಎರಡು ದಿನಗಳ ಹಿಂದೆ ಪತ್ರ ಬರೆದು ಕೋರಲಾಗಿದೆ ಎಂದು ಜಿಲ್ಲಾಡಳಿತ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.