ADVERTISEMENT

ಎಂಜಿನಿಯರ್‌ ಸೇರಿ 7 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:44 IST
Last Updated 1 ಮಾರ್ಚ್ 2018, 19:44 IST
ಮರಳು ಸಂಗ್ರಹ– ಸಾಂದರ್ಭಿಕ ಚಿತ್ರ
ಮರಳು ಸಂಗ್ರಹ– ಸಾಂದರ್ಭಿಕ ಚಿತ್ರ   

ಉಡುಪಿ: ಮರಳು ಸಾಗಾಣಿಕೆ ಪರವಾನಗಿಯನ್ನು (ಮಿನರಲ್ ಡಿಸ್‌ಪ್ಯಾಚ್‌ಮೆಂಟ್‌ ಪರ್ಮಿಟ್‌– ಎಂಡಿಪಿ) ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಸಿಬ್ಬಂದಿ ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಲೋಕೇಶಪ್ಪ, ಸಹಾಯಕ ಎಂಜಿನಿಯರ್‌ ಲೋಕೇಶ್‌, ದ್ವಿತೀಯ ದರ್ಜೆ ಸಹಾಯಕರಾದ ಧರ್ಮಲಿಂಗ, ಚಿರಂಜೀವಿ, ಜಗದೀಶ್‌ ಹಾಗೂ ‘ಡಿ’ ದರ್ಜೆ ನೌಕರ ಭುವನೇಶ್ ಹಾಗೂ ಚಿಕ್ಕಮಗಳೂರಿನ ಗುತ್ತಿಗೆದಾರ ಅಕ್ಷಯ್ ಬಂಧಿತರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅಕ್ರಮ ಪ್ರಕರಣ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿರುವ ಅನುಮಾನವಿದೆ.

ADVERTISEMENT

ಕೋಟ್ಯಂತರ ರೂಪಾಯಿಯ ಮೊತ್ತದ ಈ ಹಗರಣ ಮೊದಲು ಬೆಳಕಿಗೆ ಬಂದಿದ್ದು ಕಾಪುವಿನಲ್ಲಿ. ಅಲ್ಲಿನ ಎಸ್‌ಐ ನಿತ್ಯಾನಂದ ಗೌಡ ಅವರು ಫೆಬ್ರುವರಿ 26 ರಂದು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಬಂದ ಮರಳು ಲಾರಿಯನ್ನು ತಡೆದಿದ್ದಾರೆ. ದಾಖಲೆ ಪರಿಶೀಲನೆ ಮಾಡಿದಾಗ ಎಲ್ಲವೂ ಸರಿ ಇದ್ದದ್ದು ಕಂಡು ಬಂದಿದೆ. ಆದರೆ ಪರವಾನಗಿ ಬಗ್ಗೆ ಸಣ್ಣ ಅನುಮಾನ ಬಂದಿದೆ, ವಾಹನ ವಶಕ್ಕೆ ಪಡೆದ ಅವರು ಮರು ದಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಸ್ಥಳಕ್ಕೆ ಕರೆದು ಎಂಡಿಪಿ ಪರಿಶೀಲಿಸುವಂತೆ ಕೇಳಿದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಾರ್‌ ಕೋಡ್‌ನಲ್ಲಿ ವ್ಯತ್ಯಾಸ ಇರುವುದು ಗೊತ್ತಾಗಿದೆ. ಆ ನಂತರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಎಸ್ಪಿ ಲಕ್ಷ್ಮಣ್ ಬ. ನಿಂಬರಗಿ ಅವರು ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಿದ್ದರು. ತನಿಖೆ ಆರಂಭಿಸಿದಾಗ ಎಂಡಿಪಿ ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯಿಂದ ಬಂದಿರುವುದು ಖಚಿತವಾಗಿದೆ. ಆ ನಂತರ ಅಲ್ಲಿಗೆ ತೆರಳಿದ ತಂಡ ಅಲ್ಲಿನ ಎಸ್ಪಿ ಅಣ್ಣಾಮಲೈ ಅವರ ನೆರವಿನೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ದಾಖಲೆ ಪರಿಶೀಲನೆ ಮಾಡಿತ್ತು. ಸುಮಾರು ನಾಲ್ಕು ಸಾವಿರ ಪರವಾನಗಿಗಳನ್ನು ಈ ರೀತಿ ವಿತರಣೆ ಮಾಡಿರುವುದು ಆರಂಭಿಕ ತನಿಖೆಯಲ್ಲಿ ಗೊತ್ತಾಗಿದೆ.

ಕೋಟ್ಯಂತರ ರೂಪಾಯಿ ಹಗರಣ; ಮೇಲ್ನೋಟಕ್ಕೆ ಸಾಬೀತು

ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರ ಜಿಲ್ಲೆಗಳಲ್ಲೂ ಅಕ್ರಮ

ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿರುವ ಉಡುಪಿ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.