ADVERTISEMENT

ಎರಡು ದಿನ ಚಾರ್ಮಾಡಿ ಬಂದ್

ಭಾರಿ ಮಳೆ: 14 ಗಂಟೆ ಘಾಟಿಯಲ್ಲೇ ಸಿಲುಕಿದ್ದ ಪ್ರಯಾಣಿಕರು, ಭಯದಲ್ಲೇ ಇರುಳು ಕಳೆದರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 3:18 IST
Last Updated 13 ಜೂನ್ 2018, 3:18 IST
ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದಿರುವುದನ್ನು ತೆರವುಗೊಳಿಸಲಾಯಿತು –ಪ್ರಜಾವಾಣಿ ಚಿತ್ರ
ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದಿರುವುದನ್ನು ತೆರವುಗೊಳಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ಬ್ಯಾರೇಜ್‌ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಗುಡ್ಡ ಕುಸಿದು, ಉಂಟಾದ ಅಡೆತಡೆಯನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ತೆರವುಗೊಳಿಸಲಾಗಿದ್ದರೂ, ಘಾಟಿಯಲ್ಲಿ ಎರಡು ದಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಇದೇ 14ರವರೆಗೆ ಎರಡೂ ಕಡೆಗಳಿಂದ (ಮೂಡಿಗೆರೆ, ಮಂಗಳೂರು) ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಸ್ತೆ ಬಂದ್‌ ಆಗಿ ಸೋಮವಾರ ತಡರಾತ್ರಿಯಿಂದ ಘಾಟಿಯಲ್ಲಿ ಸಿಲುಕಿಕೊಂಡು ಸಾಲುಗಟ್ಟಿ ನಿಂತಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿ
ಕೊಟ್ಟಾಗ ಮಂಗಳವಾರ ಮಧ್ಯಾಹ್ನ 3 ಗಂಟೆಯಾಗಿತ್ತು. ಘಾಟಿಯಲ್ಲಿ ಅನ್ನ, ನೀರು ಇಲ್ಲದೆ ಸಿಲುಕಿ ಹಾಕಿಕೊಂಡಿದ್ದ 3 ಸಾವಿರಕ್ಕೂ ಅಧಿಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳನ್ನು ಯಾವ ಕಡೆಗೂ ತಿರುಗಿಸಲಾಗದ ಸ್ಥಿತಿ ಉಂಟಾಗಿತ್ತು. ಮಹಿಳೆಯರು ಮತ್ತು ಮಕ್ಕಳು, ಆಹಾರ, ನೀರು, ವಿಶ್ರಾಂತಿ ಇಲ್ಲದೆ ಲಾರಿ, ಬಸ್‌ಗಳ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆಯಲು ಹಾತೊರೆಯುತ್ತಿದ್ದರು.

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಭಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು. ಅಗ್ನಿ ಶಾಮಕ ಸಿಬ್ಬಂದಿ, ಹೆದ್ದಾರಿ ಪ್ರಾಧಿಕಾರ, ಪೊಲೀಸರು, ಸ್ವಯಂಸೇವಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಸುಕಿನಿಂದಲೇ ಹರಸಾಹಸಪಟ್ಟು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮಣ್ಣಿನ ರಾಶಿ, ಮರಗಳನ್ನು ತೆರವುಗೊಳಿಸಿದರು. ಭಾರಿ ಮಳೆಯ ನಡುವೆ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಸುಮಾರು 25 ಅಡಿಯಷ್ಟು ಎತ್ತರದ ಮಣ್ಣಿನ ರಾಶಿಯನ್ನು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಲಾಯಿತು.

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ನಿಗಾ ವಹಿಸಿದರು. ನೀರಿನಲ್ಲಿ ಬೂಟು ಕಳಚಿ ಬಿದ್ದರೂ ಅದನ್ನು ಲೆಕ್ಕಿಸದೆ ಬರಿಗಾಲಿನಲ್ಲಿಯೇ ಸಂಚರಿಸಿದರು. ಬಸ್ಸೊಂದನ್ನು ತಳ್ಳಲು ಸ್ವತಃ ಕೈಚಾಚಿ ನೆರವಾದರು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜ, ಚಾರ್ಮಾಡಿಯ  ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಹಾಗೂ ಅನೇಕ ಸ್ಥಳೀಯರು ಪ್ರಯಾಣಿಕರಿಗೆ ಹಾಲು, ಬಾಳೆಹಣ್ಣು, ಪಾನೀಯ, ಬಿಸ್ಕಿಟ್, ಊಟ, ಕುಡಿಯುವ ನೀರು ನೀಡಿ ಮಾನವೀಯತೆ ಮೆರೆದರು.

ಅಗತ್ಯ ಇದ್ದವರಿಗೆ ಔಷಧ ಒದಗಿಸಲಾಯಿತು. ಅಸ್ವಸ್ಥಗೊಂಡಿದ್ದ ಇಬ್ಬರನ್ನು ಬೆಳ್ತಂಗಡಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಒಯ್ಯಲಾಯಿತು. ದಕ್ಷಿಣ ಕನ್ನಡದ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಬಿನಿಗೆ 14 ಅಡಿ ನೀರು

ಬೆಂಗಳೂರು: ಕಬಿನಿ ಜಲಾಶಯಕ್ಕೆ 4 ದಿನಗಳಲ್ಲಿ 14 ಅಡಿ, ಕೆಆರ್‌ಎಸ್‌ ಜಲಾಶಯಕ್ಕೆ ಐದು ದಿನಗಳಲ್ಲಿ 7.50 ಅಡಿಗಳಷ್ಟು ನೀರು ಹರಿದು ಬಂದಿದೆ. ಹಾರಂಗಿ ಜಲಾಶಯಕ್ಕೆ ಸೋಮವಾರ ಒಂದೇ ದಿನ 6 ಅಡಿಗಳಷ್ಟು ನೀರು ಹರಿದು ಬಂದಿದ್ದು, ನಾಲ್ಕು ದಿನಗಳಲ್ಲಿ 10 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೇಮಾವತಿ ಜಲಾಶಯದಲ್ಲಿ ಒಂದೇ ದಿನದಲ್ಲಿ 6 ಅಡಿಯಷ್ಟು ನೀರು ಸಂಗ್ರಹವಾಗಿದೆ.

ಭದ್ರಾ ಜಲಾಶಯಕ್ಕೆ 4 ಅಡಿ ನೀರು: ಭದ್ರಾ ಜಲಾಶಯಕ್ಕೆ 22,231 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ ಜಲಾಶಯದ ನೀರಿನಮಟ್ಟ 4 ಅಡಿ ಏರಿಕೆಯಾಗಿದೆ. ತುಂಗಾ ಜಲಾಶಯಕ್ಕೆ 47,651 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 18,973 ಕ್ಯುಸೆಕ್ ನೀರು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.