ಬೆಂಗಳೂರು: ಸಂಕ್ರಮಣ ಕ್ಷಣದೊಂದಿಗೆ ದಕ್ಷಿಣಾಯಣದಿಂದ ಉತ್ತರಾಯಣದತ್ತ ಸೂರ್ಯನ ಚಲನೆ ಆರಂಭವಾಯ್ತು. ಬೆಳಿಗ್ಗೆ ಸ್ನಾನ ಮಾಡಿ ತಮ್ಮಿಚ್ಚೆಯ ಬಟ್ಟೆ ಧರಿಸಿ, ಸಿಂಗರಿಸಿಕೊಂಡಿದ್ದ ಹೆಣ್ಣುಮಕ್ಕಳು ಅಕ್ಕ–ಪಕ್ಕದ ಮನೆಗಳಿಗೆ ತೆರಳಿ ‘ಎಳ್ಳು ಬೆಲ್ಲ’ ಹಂಚಿದರು. ಕುಟುಂಬ ಸಮೇತರಾಗಿ ದೇಗುಲಗಳಿಗೆ, ನದಿತಟ, ಕೆರೆ, ಜಮೀನುಗಳಿಗೆ ತೆರಳಿ ಗಂಗಾ, ಭೂಮಿ ಪೂಜೆ ಸಲ್ಲಿಸುವ ಮೂಲಕ ನಾಡಿನ ಜನರು ಸಂಕ್ರಾಂತಿ ಆಚರಿಸಿದರು.
ಸೂರ್ಯ ಪಥ ಬದಲಾಯಿಸಿದ್ದಾಯ್ತು. ಇನ್ನೇನಿದ್ದರೂ ಬೆವರಿಳಿಸುವ, ಮುಖಕ್ಕೆ ರಾಚುವ ಬಿಸಿ ಗಾಳಿಯ, ನೆತ್ತಿ ಸುಡುವ ರಣ ಬಿಸಿಲ ದಿನಗಳು. ಈ ದಿನಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ದೇಹ ಪಡೆಯಲಿ ಎಂದೇ ‘ಎಳ್ಳು ಬೆಲ್ಲ’ ಬೀರುವ ಸಂಪ್ರದಾಯ ರೂಢಿಯಲ್ಲಿದೆ ಎನಿಸುತ್ತದೆ.
ಎಳ್ಳಿನಲ್ಲಿರುವ ಎಣ್ಣೆ ಅಂಶ ದೇಹದ ಚರ್ಮ ಬಿಸಿಲಿಗೆ ಒಣಗದಂತೆ ರಕ್ಷಣೆ ಕೊಡುತ್ತದೆ. ಬೆಲ್ಲ, ಬೆಲ್ಲ ಬೆರೆಸಿದ ‘ಬೆಲ್ಲದನೀರು’ ದೇಹ ಬಸವಳಿಯದಂತೆ ರಕ್ಷಣೆ ಕೊಡುತ್ತದೆ. ಈ ಕಾರಣಕ್ಕಾಗಿ ಎಳ್ಳು ಬೆಲ್ಲ ಬೀರುತ್ತಾ ಬರಲಾಗಿದೆ. ಎಣ್ಣೆ ಅಂಶ ಒಳಗೊಂಡ ಹುರಿದ ಶೇಂಗಾಬೇಳೆ, ಬೆಲ್ಲದ ಮೂಲ ವಸ್ತು ಕಬ್ಬಿನ ಬಳಕೆ ಮತ್ತು ಪೂಜೆ ರೂಢಿಗತವಾಗಿದೆ.
ಸಂಕ್ರಾಂತಿ ಬಂತು ಸಿರಿ ತುಂಬಿ
ಬೆಳೆದು ಬೀಗ್ಯಾಳೆ ಭೂತಾಯಿ
ಸುಗ್ಗಿ ಬಂದಿದೆ ಬನ್ನಿ, ಹಿಗ್ಗ ತಂದಿದೆ ಬನ್ನಿ, ಸಗ್ಗಾವ ತಂದಿದೆ
ಎಳ್ಳು ಬೆಲ್ಲಾವ ಕೊಟ್ಟ ಒಳ್ಳೆ ಬಾಳನು ಕೊಟ್ಟ
ಎಲ್ಲರಿಗು ಸಂಪತ್ತ ಶಿವಕೊಟ್ಟ
–ಹೀಗೆ ಜನಪದರ ಹಾಡುಗಳು ಸಂಕ್ರಾಂತಿಯ ಮಹತ್ವವನ್ನು ಕಟ್ಟಿಕೊಡುತ್ತಾ ಹೋಗುತ್ತವೆ.
ಪ್ರಕೃತಿ–ಸಂಸ್ಕೃತಿ–ವಿಕೃತಿ
ಎಳ್ಳು, ಕಬ್ಬು, ಶೇಂಗಾ ಪ್ರಕೃತಿ ಸಹಜ. ಅವುಗಳನ್ನು ಹೇಗಿವಿಯೋ ಹಾಗೆಯೇ ತಿನ್ನುವುದು ಅದರ ಸ್ವಾದವನ್ನು ಆಸ್ವಾದಿಸುವುದು ಪ್ರಕೃತಿ ಸಹಜ ಮಾನವನ ಕ್ರಿಯೆ.
ಎಳ್ಳುನ್ನು ಸಂಸ್ಕರಿಸಿ ಕರಿ ಸಿಪ್ಪೆ ತೆಗೆದು ಬಿಳಿ ಎಳ್ಳಾಗಿಸುವುದು, ಕಬ್ಬನ್ನು ಗಾಣಕ್ಕೆ ನೀಡಿ ಬೆಲ್ಲ ಮಾಡುವುದು. ಬಳಿಕ ಎಲ್ಲವನ್ನೂ ಸೇರಿಸಿಕೊಂಡು ಹಂಚುವ ಸಂಸ್ಕಾರವೇ ಸಂಸ್ಕೃತಿ.
ಬದಲಿಗೆ, ಅದೇ ಎಣ್ಣೆಯನ್ನು ಬೆಂಕಿ ಬಿದ್ದ ಮನೆಗೆ ಸುರಿಯುವುದು(’ಬೆಂಕಿಗೆ ತುಪ್ಪ ಸುರಿ’ ಎಂಬ ನುಡಿ), ಇನ್ನೊಬ್ಬರು ಕಾಲು ಜಾರಿ ಬೀಳಲೆಂದು ನಡೆದಾಡುವ ದಾರಿಗೆ ಸುರಿಯುವುದು, ಕಬ್ಬನ್ನು ಬೆಲ್ಲವಾಗಿಸುವ ಬದಲು ಕಾಕಂಬಿ ಮಾಡಿ ಮದ್ಯ ತಯಾರಿಸುವುದು ವಿಕೃತ ಭಾವ.
ಈ ವಿಕೃತ ಭಾವಕ್ಕೆ ಮನುಷ್ಯ ಅವಕಾಶ ಕೊಡದೆ ಪ್ರಕೃತಿ ಸಹಜ ಹಾಗೂ ಸಂಸ್ಕಾರಯುಕ್ತ ಸಂಸ್ಕೃತಿ ಬದುಕು ಸಾಗಿಸುವಂತಾಗಲಿ ಎಂಬುದು ಸಂಕ್ರಾಂತಿಯ ಆಶಯ.
ರೈತರು ಮಿಶ್ರ ಬೆಳೆಯಾಗಿ ಬೆಳೆದ ಅವರೆ ಈ ಕಾಲದಲ್ಲಿ ಫಲ ನೀಡುತ್ತದೆ. ಹೊಸ ದಿನಕ್ಕೆ ಅವರೆಕಾಯಿ ಬೇಯಿಸುವ ಮೂಲಕ ಮನೆಯಲ್ಲಿ ಅದರ ಸೊಗಡು ಪಸರಿಸುವಂತೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಅವರೆಕಾಯಿ, ಗೆಣಸಿನ ವ್ಯಾಪಾರವೂ ಜೋರಾಗಿಯೇ ನಡೆದಿತ್ತು. ನದಿತಟ, ಕರೆ, ಜಮೀನು, ಉದ್ಯಾನಗಳಿಗೆ ತೆರಳಿದ್ದ ಗ್ರಾಮೀಣ ಜನರು ಪೂಜೆ ಸಲ್ಲಿಸಿ, ಹತ್ತಾರು ಬಗೆಯ ಪುಡಿ ಚಟ್ನಿ, ಹಲವು ಪಲ್ಯಗಳನ್ನೊಳಗೊಂಡ ರೊಟ್ಟಿ–ಬುತ್ತಿ ಸವಿದರು.
ಇತರ ರಾಜ್ಯಗಳಲ್ಲಿ:
ರಾಜ್ಯದ ಕೆಲವೆಡೆ ಹೋರಿಗಳನ್ನು ಕಿಚ್ಚಾಯಿಸುವ ಸಾಂಪ್ರದಾಯಿಕ ಆಚರಣೆಯನ್ನು ಸಂಜೆ ವೇಳೆಗೆ ನಡೆಸಲು ಸಿದ್ಧತೆಗಳು ನಡೆದಿವೆ.
ಇನ್ನು ತಮಿಳುನಾಡಿನಲ್ಲಿ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಿಸುವುದು ಇಲ್ಲಿನ ವಿಶೇಷ. ಮಹಿಳೆಯರು ಪೊಂಗಲ್ ತಯಾರಿಸಿ ನೈವೇದ್ಯ ಸಲ್ಲಿಸಿದರು. ರೈತರು ಬೆಳೆದ ಭತ್ತದ ಪೈರಿನ ಹೊಸ ಅಕ್ಕಿ, ಹಾಲು, ಬೆಲ್ಲೆಗಳಿಂದ ಪೊಂಗಲ್ ತಯಾರಿಸಲಾಗುತ್ತದೆ.
ಈ ವೇಳೆ ಆಚರಣೆಯಲ್ಲಿದ್ದ ಜಲ್ಲಿಕಟ್ಟು ಸ್ಪರ್ಧೆ ನಿಷೇಧ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ. ಇದರಿಂದ ಜಲ್ಲಿಕಟ್ಟು ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎತ್ತಿನಗಾಡಿ ಓಟ ಸ್ಪರ್ಧೆ ಆಯೋಜಿಸುವಂತಿಲ್ಲ. ಇದು ಕೆಲವೆಡೆ ಸಂಕ್ರಾಂತಿ ಸಂಭ್ರಮವನ್ನು ಕೊಂಚ ತಗ್ಗಿಸಿದೆ.
ಮುಂಬೈನಲ್ಲೂ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಿಸಿದರೆ, ಕೋಲ್ಕತ್ತ ಸಮೀಪ ಗಂಗಾ ಸಾಗರದಲ್ಲಿ ಭಕ್ತರು ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿದರು. ಹಲಹಾಬಾದ್‌ನಲ್ಲೂ ಭಕ್ತರು ನದಿಯಲ್ಲಿ ಮಿಂದು ಸೂರ್ಯನ ಪ್ರಾರ್ಥನೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.