ADVERTISEMENT

ಐದು ಲಕ್ಷ ಟನ್‌ ಅಕ್ಕಿ, ಭತ್ತ ಖರೀದಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ರಾಜ್ಯದ ಅಕ್ಕಿ ಗಿರಣಿಗಳಿಂದ ಐದು ಲಕ್ಷ ಟನ್‌ ಅಕ್ಕಿ ಮತ್ತು ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ರೂ 1,600 ದರದಲ್ಲಿ ಪ್ರತಿ ಕ್ವಿಂಟಲ್‌ ಭತ್ತ ಮತ್ತು ರೂ 2,400 ದರದಲ್ಲಿ ಪ್ರತಿ ಕ್ವಿಂಟಲ್‌ ಅಕ್ಕಿ ಖರೀದಿಗೆ ತೀರ್ಮಾನಿಸಲಾಗಿದೆ ಸಚಿವ ಜಯಚಂದ್ರ ತಿಳಿಸಿದರು.

‘ಈವರೆಗೂ ಅಕ್ಕಿ ಗಿರಣಿಗಳಿಂದ ಲೆವಿ ಅಕ್ಕಿ ಸಂಗ್ರಹಿಸ­ಲಾಗುತ್ತಿತ್ತು. ಆದರೆ, ಅದರಲ್ಲಿ ಹೆಚ್ಚಿನ ಪಾಲು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಅದರ ಬದಲಿಗೆ ಅಕ್ಕಿ ಗಿರಣಿ­ಗಳಿಂದ ನೇರವಾಗಿ ಅಕ್ಕಿ ಮತ್ತು ಭತ್ತ ಖರೀದಿಸಲು ತೀರ್ಮಾನಿಸಲಾಗಿದೆ. ಆಯಾ ಗಿರಣಿಗಳಲ್ಲಿ ನಡೆ­ಯುವ ‘ಹಲ್ಲಿಂಗ್‌’ (ಭತ್ತವನ್ನು ಅಕ್ಕಿ ಮಾಡುವುದು) ಪ್ರಮಾಣವನ್ನು ಆಧರಿಸಿ ಗುರಿ ನಿಗದಿ ಮಾಡಲಾಗು­ವುದು. ಐದು ಲಕ್ಷ ಟನ್‌ ಅಕ್ಕಿ, ಭತ್ತ ಒದಗಿಸುವುದನ್ನು ಕಡ್ಡಾಯ ಮಾಡಲಾಗುವುದು’ ಎಂದರು.

ಈವರೆಗೂ ಜ್ಯೋತಿ ತಳಿಯ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿರಲಿಲ್ಲ. ಕರಾವಳಿ ಜಿಲ್ಲೆ­ಗಳಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಸು­ಬಲ ಅಕ್ಕಿಯನ್ನೂ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪ್ರತಿ ಕ್ವಿಂಟಲ್‌ಗೆ ರೂ 1,600ರ ದರದಲ್ಲಿ 1 ಲಕ್ಷ ಟನ್‌ ಜ್ಯೋತಿ ಭತ್ತವನ್ನು ಖರೀದಿ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.

ಪಡಿತರ ಖಾತ್ರಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನಡೆಯುವ ಪಡಿತರ ವಿತರಣೆಯಲ್ಲಿ ಅಕ್ರಮಗಳಿಗೆ ಕಡಿ­ವಾಣ ಹಾಕಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರತಿ ತಿಂಗಳ 1ರಿಂದ 10ನೇ ದಿನಾಂಕದವರೆಗೆ ನ್ಯಾಯ­ಬೆಲೆ ಅಂಗಡಿಗಳು ಕಡ್ಡಾಯವಾಗಿ ತೆರೆದಿರಬೇಕು ಮತ್ತು ಆ ಅವಧಿಯಲ್ಲೇ ಪಡಿತರ ವಿತರಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

‘ಈ ಕಾರ್ಯಕ್ರಮಕ್ಕೆ ‘ಪಡಿತರ ಖಾತ್ರಿ’ ಎಂದು ಹೆಸರಿಡುವ ಯೋಚನೆ ಇದೆ. ಭಾನುವಾರದ ಅವಧಿ­ಯಲ್ಲೂ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ ಮಾಡಬೇಕಾಗುತ್ತದೆ. ತಿಂಗಳ ಮೊದಲಲ್ಲೇ ಪಡಿತರ ವಿತರಿಸುವುದಕ್ಕೆ ಪೂರಕವಾಗಿ ಪೂರೈಕೆ ಮತ್ತು ದಾಸ್ತಾನು ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗುವುದು’ ಎಂದು ಜಯಚಂದ್ರ ಹೇಳಿದರು.

ತಾಳೆಗೆ ಬೆಂಬಲ ಬೆಲೆ: ಈ ಬಾರಿ ಪ್ರತಿ ಟನ್‌ ತಾಳೆ ಬೆಳೆಗೆ ರೂ 8,500 ಬೆಂಬಲ ಬೆಲೆ ನಿಗದಿ ಮಾಡಲಾಗಿ­ದೆ. ಕಳೆದ ವರ್ಷ ಪ್ರತಿ ಟನ್‌ಗೆ ರೂ 7,500 ಬೆಂಬಲ ಬೆಲೆ ಇತ್ತು. ಬೆಂಬಲ ಬೆಲೆಯನ್ನು ರೂ 1,000ದಷ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಸಮ್ಮತಿ ನೀಡಿದೆ ಎಂದು ತಿಳಿಸಿದರು.

ಬಸ್‌ ಖರೀದಿ: ಜೆನರ್ಮ್‌ ಯೋಜನೆಯ ಅನು­ದಾನ ಬಳಸಿಕೊಂಡು 2,104 ಬಸ್ಸುಗಳನ್ನು ಖರೀದಿ­ಸುವ ಪ್ರಸ್ತಾವಕ್ಕೂ ಸಂಪುಟದ ಒಪ್ಪಿಗೆ ದೊರೆತಿದೆ. ಬಸ್ಸು ಖರೀದಿಗೆ 1,111.70 ಕೋಟಿ ವೆಚ್ಚವಾಗ­ಲಿದ್ದು, ರಾಜ್ಯ ಸರ್ಕಾರ ರೂ 214 ಕೋಟಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರೂ 245 ಕೋಟಿ ಭರಿಸುತ್ತದೆ. ಉಳಿದ ಮೊತ್ತವನ್ನು ನರ್ಮ್‌ ಯೋಜನೆಯಿಂದ ಭರಿಸಲಾಗುವುದು ಎಂದು ಸಚಿವರು ಹೇಳಿದರು.

ಈ  ಯೋಜನೆಯಡಿ ಖರೀದಿಸಿದ ಬಸ್ಸುಗಳ ನಿರ್ವಹಣೆ­ಗೆ ಪ್ರತ್ಯೇಕವಾದ ನಗರ ಸಾರಿಗೆ ನಿಗಮಗಳನ್ನು ಅಸ್ತಿತ್ವಕ್ಕೆ ತರಲಾಗುತ್ತದೆ. ಈ ನಿಗಮಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧೀನದಲ್ಲೇ ಕೆಲಸ ಮಾಡುತ್ತವೆ ಎಂದು ತಿಳಿಸಿದರು.

ಸಂಪುಟ ಸಭೆಯ ಇತರೆ ನಿರ್ಣಯಗಳು
ಕ್ಷೀರಭಾಗ್ಯ ಯೋಜನೆಯ ನಿರ್ವಹಣೆಗೆ ಶಿಕ್ಷಣ ಇಲಾಖೆಗೆ ₨ 314 ಕೋಟಿ.

ಚಾಮರಾಜನಗರ, ಕೊಡಗು, ಕೊಪ್ಪಳ, ಗುಲ್ಬರ್ಗ, ಗದಗ ಮತ್ತು ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕಟ್ಟಡ ನಿರ್ಮಾಣ ಅಂದಾಜು ವರದಿಗೆ ಒಪ್ಪಿಗೆ.

ಲಂಚ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಕಾರಣದಿಂದ ಸಚಿವಾಲಯದ ಶಾಖಾಧಿಕಾರಿ ಎಚ್‌.ಜಯರಾಂ ಸೇವೆಯಿಂದ ವಜಾ.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಅವಧಿಯಲ್ಲಿ ಕರ್ತವ್ಯಲೋಪ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್‌ ಅಧಿಕಾರಿ ಚಿಕ್ಕೆರೂರು ವಿರುದ್ಧದ ಪ್ರಕರಣ ರದ್ದು.

ಕುಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಸೋಲಾರ್‌ ಪಂಪ್ ವಿತರಣೆ.

ಮೈಸೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಸೌಕರ್ಯ ಕಲ್ಪಿಸಲು ₨ 5.6 ಕೋಟಿ

49 ಮತ್ತು 10ನೇ ತರಗತಿ ಮಕ್ಕಳಿಗೆ ಬಿಸಿಯೂಟಕ್ಕೆ ಪಡಿತರ ಒದಗಿಸಲು ₨ 235.95 ಕೋಟಿ

ಮಾಜಿ ಸಚಿವ ಮುನಿಯಪ್ಪ ಮುದ್ದಪ್ಪ ಅವರಿಂದ ಸರ್ಕಾರಕ್ಕೆ ಬರಬೇಕಿದ್ದ ₨ 1.02 ಲಕ್ಷ ಬಾಕಿ ಮನ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT