ADVERTISEMENT

`ಕಟ್ಟಡ ನಿರ್ಮಾಣ ತರಬೇತಿಗೆ ಅಕಾಡೆಮಿ'

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:49 IST
Last Updated 1 ಸೆಪ್ಟೆಂಬರ್ 2013, 19:49 IST

ಬೆಂಗಳೂರು: ಕಟ್ಟಡ ನಿರ್ಮಾಣದ ಕುರಿತು ತರಬೇತಿ ನೀಡುವ ಸಲುವಾಗಿರೂ. 200 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ನಿರ್ಮಾಣ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಇಲ್ಲಿ ಪ್ರಕಟಿಸಿದರು.

ನಗರದ ಅರಮನೆ ಮೈದಾನದಲ್ಲಿ ಪ್ರದೇಶ ಕಾಂಗ್ರೆಸ್‌ನ ಕಾರ್ಮಿಕ ವಿಭಾಗ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, `ಈ ಅಕಾಡೆಮಿಯನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಲಾಗುವುದು. ಇದು ತರಬೇತಿ ಜತೆಗೆ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಗಮನ ನೀಡಲಿದೆ' ಎಂದು ಹೇಳಿದರು.

ಕಾರ್ಮಿಕರ ಅನುಕೂಲಕ್ಕಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಲ್ಯಾಣ ಮಂಟಪಗಳನ್ನು ತಲಾ ಆರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.

ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಗರಗಳಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ಇದಕ್ಕಾಗಿರೂ.50 ಕೋಟಿ ಪ್ರಸ್ತಾವನೆ ಕಾರ್ಮಿಕ ಇಲಾಖೆ ಸಲ್ಲಿಸಿದೆ. ಈ ಶಾಲೆಗಳಲ್ಲಿ ಉನ್ನತ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿ ಅವುಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕರಿಗಾಗಿ ಮೂರು ಅಭಿವೃದ್ಧಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗುವುದು. ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ರೂ.130 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಎಂದರು.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರೂ.2,064 ಕೋಟಿ ಲಭ್ಯ ಇದ್ದು, ಈ ವರ್ಷ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲುರೂ.800 ಕೋಟಿ ಖರ್ಚು ಮಾಡಲಾಗುವುದು ಎಂದರು.

ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ಮಾತನಾಡಿ, ಮನೆ ನಿರ್ಮಿಸುವ ಕಾರ್ಮಿಕರಿಗೆ ರೂ. 50 ಸಾವಿರ ಸಬ್ಸಿಡಿ ಸೌಲಭ್ಯ ಹಾಗೂ ಕಾರ್ಮಿಕರ ಮದುವೆಗೆ ರೂ. 50 ಸಾವಿರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಎರಡು ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್ ಪ್ರಕಾಶಂ ಮಾತನಾಡಿದರು. ಗೃಹ ಸಚಿವ ಕೆ.ಜೆ. ಜಾರ್ಜ್, ಮಾಜಿ ಸಂಸದರಾದ ಎಚ್.ಟಿ. ಸಾಂಗ್ಲಿಯಾನ, ತೇಜಸ್ವಿನಿಗೌಡ, ಅಮರಸಿಂಹ ಪಾಟೀಲ್, ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, ಶಾಸಕ ಡಿ.ಕೆ. ಶಿವಕುಮಾರ್, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ಪುಟ್ಟಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.