ADVERTISEMENT

ಕತ್ತಲಲ್ಲಿ ಹಣ ಮಾಡುವ ದುರಾಸೆ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಬೆಂಗಳೂರು: `ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕ್ಷಾಮಕ್ಕೆ ಕಲ್ಲಿದ್ದಲು ಕೊರತೆ ಕಾರಣ ಎಂಬುದು ಕುಂಟು ನೆಪ ಅಷ್ಟೇ. ನಿರಂತರವಾಗಿ ವಿದ್ಯುತ್ ಖರೀದಿಸಿ ಕಮಿಷನ್ ಪಡೆಯುವ ದುರಾಸೆಯಿಂದ ಉದ್ದೇಶಪೂರ್ವಕವಾಗಿ ಅಭಾವ ಸ್ಥಿತಿ ಸೃಷ್ಟಿಸಲಾಗಿದೆ~ ಎಂಬ ಆರೋಪಗಳು ಇಂಧನ ಇಲಾಖೆಯಲ್ಲಿಯೇ ಬಲವಾಗಿ ಕೇಳಿಬರುತ್ತಿವೆ.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಿಂದ ಆಂಧ್ರಪ್ರದೇಶದ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಹೀಗಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ಚಿತ್ರಣ ಬೇರೆಯೇ ಇದೆ. ಕಲ್ಲಿದ್ದಲು ಕೊರತೆಯನ್ನು ಕೃತಕವಾಗಿ ಸೃಷ್ಟಿಸಲಾಗಿದೆ ಎನ್ನುತ್ತವೆ ಇಲಾಖೆಯ ಮೂಲಗಳು.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಹಿಂದೆಲ್ಲ 6ರಿಂದ 7 ಲಕ್ಷ ಟನ್ ಕಲ್ಲಿದ್ದಲನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಆದರೆ ಈಚೆಗೆ ಸಂಗ್ರಹ ಪ್ರಮಾಣ ಒಂದೂವರೆ ಲಕ್ಷ ಟನ್‌ಗಿಂತಲೂ ಕಡಿಮೆ ಆಗಿದೆ. ಇಷ್ಟೊಂದು ಕಡಿಮೆಯಾಗಲು ಕಾರಣ ಏನು ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ADVERTISEMENT

ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಆಗದಿರುವುದೇ ಕೊರತೆಗೆ ಕಾರಣ ಎನ್ನುತ್ತಾರೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ. ಕೊರತೆಗೆ ತೆಲಂಗಾಣ ಹೋರಾಟವೇ ಮುಖ್ಯ ಕಾರಣವಲ್ಲ. ಇಲಾಖೆಯ ನಿರ್ಲಕ್ಷ್ಯ, ವಿದ್ಯುತ್ ಖರೀದಿ ಮತ್ತು ಅದರಿಂದ ಒದಗುವ `ಒಳಲಾಭ~ದ ಆಸೆಯಿಂದ ಕೃತಕ ಅಭಾವ ಸೃಷ್ಟಿಸಲಾಗಿದೆ ಎನ್ನುತ್ತಾರೆ ಇಲಾಖೆಯ ಹಾಲಿ ಮತ್ತು ಹಿಂದೆ ಕಾರ್ಯನಿರ್ವಹಿಸಿರುವ ಕೆಲವು ಅಧಿಕಾರಿಗಳು.

ತೆಲಂಗಾಣ ಹೋರಾಟ ತಿಂಗಳ ಹಿಂದಷ್ಟೇ ಆರಂಭವಾಗಿದೆ. ಆದರೆ, ಅದಕ್ಕೂ ಮೊದಲೇ ಕಲ್ಲಿದ್ದಲು ಸಂಗ್ರಹ ಪ್ರಮಾಣ ತೀರಾ ಕಡಿಮೆ ಇತ್ತು. ಜೂನ್‌ನಲ್ಲಿ ಬರಿ 1.61 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿತ್ತು.

ಇದನ್ನು ಗಮನಿಸಿದರೆ ತೆಲಂಗಾಣ ಹೋರಾಟ ಶುರುವಾಗುವುದಕ್ಕೂ ಮೊದಲೇ ಕಲ್ಲಿದ್ದಲು ಸಂಗ್ರಹ ಪ್ರಮಾಣ ಕಡಿಮೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಹಿಂದೆ ಇಷ್ಟೊಂದು ಕಡಿಮೆ ಇರುತ್ತಿರಲಿಲ್ಲ. 2009ರ ಜನವರಿಯಲ್ಲಿ 5.29 ಲಕ್ಷ ಟನ್, 2008ರ ಡಿಸೆಂಬರ್‌ನಲ್ಲಿ 5.12 ಲಕ್ಷ ಟನ್ ಕಲ್ಲಿದ್ದಲು ಇತ್ತು. ಬೇರೆ ಸಂದರ್ಭದಲ್ಲೂ ಸರಾಸರಿ ಇದೇ ಪ್ರಮಾಣದಲ್ಲಿ ಸಂಗ್ರಹ ಇರುತ್ತಿತ್ತು.

ಆಂಧ್ರಪ್ರದೇಶದ ಸಿಂಗರೇಣಿ ಕೋಲ್ ಫೀಲ್ಡ್ಸ್, ಮಹಾರಾಷ್ಟ್ರದ ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಮತ್ತು ಒಡಿಶಾದ ಮಹಾನಂದಿ ಕೋಲ್‌ಫೀಲ್ಡ್ಸ್‌ನಿಂದ ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಪೂರೈಕೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರ್ಷಿಕ 77 ಲಕ್ಷ ಟನ್ ಕಲ್ಲಿದ್ದಲಿನ ಅಗತ್ಯವಿದ್ದು, ಪ್ರತಿ ತಿಂಗಳು ಪೂರೈಕೆಯಾಗಬೇಕಾದ ಕಲ್ಲಿದ್ದಲು ಪ್ರಮಾಣವನ್ನು ವರ್ಷದ ಆರಂಭದಲ್ಲೇ ನಿರ್ಧರಿಸಲಾಗುತ್ತದೆ. ಒಂದು ವೇಳೆ ಹೆಚ್ಚಿಗೆ ಅಗತ್ಯವಿದ್ದರೆ ಸಂಬಂಧಪಟ್ಟ ರಾಜ್ಯಗಳು ಜನವರಿಯಲ್ಲೇ ತಿಳಿಸಬೇಕಾಗುತ್ತದೆ.

ನಿಗದಿತ ಪ್ರಮಾಣದಲ್ಲಿ ಪ್ರತಿ ತಿಂಗಳು ಕಲ್ಲಿದ್ದಲು ಪೂರೈಕೆ ಆಗದೆ ಇದ್ದರೆ, ಅದಕ್ಕೆ ಕಾರಣ ಏನು, ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪತ್ತೆಹಚ್ಚಿ ಸಮಸ್ಯೆ ಬಗೆಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗುತ್ತದೆ. ಹಂಚಿಕೆಯಾಗಿರುವ ಕೋಟಾಗೆ ಅನುಗುಣವಾಗಿ ಕಲ್ಲಿದ್ದಲು ಪಡೆಯುವ ಹಕ್ಕು ರಾಜ್ಯಕ್ಕೆ ಇದೆ. ಇದರಲ್ಲಿ ಏನಾದರೂ ವ್ಯತ್ಯಾಸ ಆದರೆ ಪ್ರಶ್ನಿಸಬಹುದು. ಕೋಲ್‌ಫೀಲ್ಡ್ಸ್‌ನಿಂದ ಪ್ರತಿದಿನ ಮಾಹಿತಿ ಬರುತ್ತದೆ. ಏನಾದರೂ ಸಮಸ್ಯೆ ಇದ್ದರೆ ಮೊದಲೇ ತಿಳಿಸುತ್ತಾರೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಈ ರೀತಿಯ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಗರಿಷ್ಠ ಒಂದು ತಿಂಗಳು, ಕನಿಷ್ಠ ಹತ್ತು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳಬೇಕು. ಆದರೆ ಇಷ್ಟೊಂದು ಕಡಿಮೆಯಾಗಲು ನಿರ್ವಹಣೆಯಲ್ಲಿನ ವೈಫಲ್ಯವೇ ಕಾರಣ. ಆರ್‌ಟಿಪಿಎಸ್ ಮತ್ತು ವಿದ್ಯುತ್ ನಿಗಮದಲ್ಲಿ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ ಭ್ರಷ್ಟರ ಸಂಖ್ಯೆ ಪ್ರಾಮಾಣಿಕರಿಗಿಂತ ದೊಡ್ಡದು. ಹಿಂದೆ ಕೆಲವರನ್ನು ಬದಲಾಯಿಸಲಾಗಿತ್ತು. ಅವರೆಲ್ಲ ಈಗ ಮತ್ತೆ ಅದೇ ಜಾಗಗಳಿಗೆ ಬಂದಿದ್ದಾರೆ. ತಾಂತ್ರಿಕ ಕಾರಣಗಳ ನೆಪವೊಡ್ಡಿ ಆಗಾಗ್ಗೆ ಘಟಕಗಳನ್ನು ಸ್ಥಗಿತಗೊಳಿಸಿರುವ ಸಾಧ್ಯತೆಗಳಿವೆ ಎಂಬ ಅನುಮಾನವನ್ನು ಹಿಂದೆ ನಿಗಮದಲ್ಲಿ ಕೆಲಸ ಮಾಡಿರುವ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.

ಮುಸುಕಿನ ಗುದ್ದಾಟ: ಜೂನ್‌ನಲ್ಲೂ ಕಲ್ಲಿದ್ದಲು ಸಂಗ್ರಹ ಪ್ರಮಾಣ ಕಡಿಮೆ ಇರುವುದು ನೋಡಿದರೆ ಕೃತಕವಾಗಿ ಕಲ್ಲಿದ್ದಲು ಕೊರತೆ ಸೃಷ್ಟಿಸಿರುವುದು ಗೊತ್ತಾಗುತ್ತದೆ. ಕಳೆದ ವರ್ಷ ವಿದ್ಯುತ್ ಖರೀದಿಗಾಗಿ 3,847 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಈ ವರ್ಷ ಬಜೆಟ್‌ನಲ್ಲಿ ವಿದ್ಯುತ್ ಖರೀದಿಗೆ ಹಣ ನೀಡಿಲ್ಲ. ಕಮಿಷನ್ ಆಸೆಗಾಗಿ ವಿದ್ಯುತ್ ಖರೀದಿ ಮಾಡಲು ಆಸಕ್ತಿ ತೋರುತ್ತಿರುವ ಇಂಧನ ಇಲಾಖೆ, ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳುವಲ್ಲಿ ಎಡವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂಧನ ಸಚಿವರೇ ಪರೋಕ್ಷವಾಗಿ ಕೃತಕ ಅಭಾವ ಸೃಷ್ಟಿಗೆ ಕುಮ್ಮಕ್ಕು ನೀಡುತ್ತಿರಬಹುದು ಎಂಬ ಸಂಶಯವನ್ನು ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.

ಕಲ್ಲಿದ್ದಲು ಖರೀದಿಗೆ ಮುಂಗಡ ಹಣ ಪಾವತಿಯಾಗದಿದ್ದರೆ, ಖರೀದಿ ಮಾಡಿರುವ ಕಲ್ಲಿದ್ದಲಿಗೆ ಹಣ ನೀಡದಿದ್ದರೆ ಅಥವಾ ಸಾಗಾಣಿಕೆಯ ಗುತ್ತಿಗೆದಾರರು ಕಳ್ಳಾಟ ಆಡಿದರೆ ಕಲ್ಲಿದ್ದಲು ಕೊರತೆ ಉಂಟಾಗುತ್ತದೆ. ಈ ಮೂರರಲ್ಲಿ ಯಾವ ಕಾರಣದಿಂದಾಗಿ ಕಲ್ಲಿದ್ದಲು ಪೂರೈಕೆಯಾಗಿಲ್ಲ ಎಂಬುದನ್ನು ಸರ್ಕಾರವೇ ಹೇಳಬೇಕು. ಮೊದಲಿನಿಂದಲೂ ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗದೆ ಇದ್ದರೆ ಅದಕ್ಕೆ ನಿಗಮವೇ ಹೊಣೆ. ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರಾ? ಎಂಬುದು ಹಿಂದೆ ಇದೇ ಇಲಾಖೆಯಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿಯೊಬ್ಬರ ಪ್ರಶ್ನೆ.

ಈಗಲೇ ಯಾಕೆ ಸಮಸ್ಯೆ: ಕಲ್ಲಿದ್ದನ್ನು ತೊಳೆಯದೆ ಬಳಸುತ್ತಿರುವುದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಸರಿಯಲ್ಲ, ಮೂರು ವರ್ಷಗಳಿಂದ ವಿದ್ಯುತ್ ಉತ್ಪಾದನಾ ಘಟಕಗಳು ಚೆನ್ನಾಗಿಯೇ ನಡೆಯುತ್ತಿದ್ದವು. ಬರಿ ಒಂದೂವರೆ ತಿಂಗಳಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ ಎಂದರೆ ಏನು ಅರ್ಥ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಕಲ್ಲಿದ್ದಲನ್ನು ತೊಳೆಯುವ ಅಗತ್ಯವಿಲ್ಲ. ಅದನ್ನು ಬಳಸುವುದಕ್ಕೂ ಮುನ್ನ ಸ್ವಲ್ಪ ಎಚ್ಚರ ವಹಿಸಿದರೆ ಕಲ್ಲು, ಮಣ್ಣು ಬಾಯ್ಲರ್‌ಗಳಿಗೆ ಹೋಗುವುದನ್ನು ತಡೆಯಬಹುದು. ತೊಳೆಯದ ಕಾರಣ ತಾಂತ್ರಿಕ ಸಮಸ್ಯೆಗಳು ಉಂಟಾಗಿವೆ ಎಂಬುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಹೆಚ್ಚಿನ ಸಂಗ್ರಹ ಸರಿಯಲ್ಲ: ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳುವಲ್ಲಿ ಎಡವಿಲ್ಲ. 6-7 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳುವುದು ಸರಿಯಲ್ಲ, ಹೆಚ್ಚು ದಿನ ಇದ್ದರೆ ಬೂದಿಯಾಗುತ್ತದೆ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲೂ ಕಲ್ಲಿದ್ದಲು ಸಮಸ್ಯೆ ಇದೆ. ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮಕ್ಕೂ (ಎನ್‌ಟಿಪಿಸಿ) ಕಲ್ಲಿದ್ದಲು ಕೊರತೆ ಉಂಟಾಗಿದೆ. ಪ್ರತಿ ವರ್ಷ ಕಲ್ಲಿದ್ದಲು ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ಪೂರ್ಣ ನಿಂತಿಲ್ಲ: ಸೆಪ್ಟೆಂಬರ್‌ನಲ್ಲಿ ಸಿಂಗರೇಣಿಯಿಂದ 2,09,444 ಟನ್ ಕಲ್ಲಿದ್ದಲು ಪೂರೈಕೆಯಾಗಬೇಕಿತ್ತು. ಈ ಪೈಕಿ 71,478 ಟನ್ ಪೂರೈಕೆಯಾಗಿದೆ. ಅಂದರೆ ಶೇ 34.13ರಷ್ಟು ಕಲ್ಲಿದ್ದಲು ಪೂರೈಕೆಯಾಗಿದೆ. ಇನ್ನು ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ 1,75,450 ಟನ್ ಕಲ್ಲಿದ್ದಲು ಪೂರೈಕೆಯಾಗಬೇಕಿತ್ತು. ಆದರೆ 2,14,250 ಟನ್ ಬಂದಿದೆ. ಅಂದರೆ ಶೇ 124ರಷ್ಟು ಪೂರೈಕೆಯಾಗಿದೆ. ಸಿಂಗರೇಣಿಯಿಂದ ಕಡಿಮೆಯಾಗಿರುವ ಕಲ್ಲಿದ್ದನ್ನು ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.