ADVERTISEMENT

ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ: ತನಿಖೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಬೆಂಗಳೂರು: ಕನಕಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಲು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಮಂಗಳವಾರ ಪ್ರಕಟಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ತಾಕತ್‌ಸಿಂಗ್ ರಾಣಾವತ್ ಅವರೂ ಈ ಸಮಿತಿಯ ಸದಸ್ಯರಾಗಿದ್ದಾರೆ. ಸಮಿತಿ 15 ದಿನಗಳಲ್ಲಿ ಇಲಾಖೆಗೆ ವರದಿ ಸಲ್ಲಿಸಲಿದೆ ಎಂದು ಅವರು ತಿಳಿಸಿದರು.

ಕಾಳ್ಗಿಚ್ಚಿನ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಶರ್ಮಾ ನೇತೃತ್ವದ ಸಮಿತಿಯಲ್ಲದೆ, ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ನೇತೃತ್ವದಲ್ಲೂ ಸಮಿತಿ ರಚನೆಯಾಗಿದೆ.

ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ಕನಕಪುರ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಉಂಟಾಗಿರಬಹುದಾದ ತೆರಿಗೆ, ವರಮಾನ ನಷ್ಟದ ಕುರಿತು ಪರಿಶೀಲನೆ ನಡೆಸಲಿದೆ~ ಎಂದು ಮಾಹಿತಿ ನೀಡಿದರು.

ದನಕರುಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಾಡಿಗೆ ಅಟ್ಟಿ, ಅಲ್ಲಿ ಯಥೇಚ್ಛವಾಗಿ ದೊರೆಯುವ ಮೇವು ತಿಂದು ಬೆಳೆಯುವ ದನಗಳನ್ನು ಕೇರಳ ಮತ್ತು ತಮಿಳುನಾಡಿನ ಕಟುಕರಿಗೆ ಮಾರಾಟ ಮಾಡುವ ಜಾಲ ಕೊಳ್ಳೇಗಾಲ, ಚಾಮರಾಜನಗರ ಪ್ರದೇಶದಲ್ಲಿ ಇರುವುದು ಗಮನಕ್ಕೆ ಬಂದಿದೆ.
 
ಈ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ದನಕರುಗಳಿಗೆ ತೊಂದರೆ ನೀಡುವ ಹುಲಿ, ಚಿರತೆಯಂಥ ವನ್ಯಜೀವಿಗಳನ್ನು ಕೊಂದಿರುವ ಪ್ರಕರಣಗಳೂ ವರದಿಯಾಗಿವೆ. ಈ ಸಮಸ್ಯೆಯ ನಿವಾರಣೆಗೆ ಸದ್ಯದಲ್ಲೇ ಕೇರಳ ಮತ್ತು ತಮಿಳುನಾಡಿನ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಮನುಷ್ಯ ಮತ್ತು ಚಿರತೆಗಳ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಯೋಜನೆ ರೂಪಿಸುವ ಆಲೋಚನೆ ಇಲಾಖೆಗೆ ಇದೆ ಎಂದು ಅವರು ತಿಳಿಸಿದರು.

ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ, ಕ್ರಿಕೆಟಿಗ ಅನಿಲ್ ಕುಂಬ್ಳೆ, `ಈ ಕರಪತ್ರ, ಪೋಸ್ಟರ್‌ಗಳನ್ನು ಅರಣ್ಯ ಪ್ರದೇಶದ ಆಸುಪಾಸಿನಲ್ಲಿರುವ ಪ್ರತಿ ಗ್ರಾಮಗಳಲ್ಲಿ ಹಂಚಲಾಗುವುದು. ಕಾಳ್ಗಿಚ್ಚಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು~ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಕಾಳ್ಗಿಚ್ಚು ಕಂಡುಬಂದಲ್ಲಿ ಸಾರ್ವಜನಿಕರು 080-23467919 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.