ADVERTISEMENT

ಕರವೇ ಆಮರಣ ನಿರಶನ ಆರಂಭ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2011, 19:30 IST
Last Updated 20 ನವೆಂಬರ್ 2011, 19:30 IST
ಕರವೇ ಆಮರಣ ನಿರಶನ ಆರಂಭ
ಕರವೇ ಆಮರಣ ನಿರಶನ ಆರಂಭ   

ಬೆಳಗಾವಿ: ಕನ್ನಡ ವಿರೋಧಿ ಚಟುವಟಿಕೆ ನಡೆಸಿದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂದಾ ಬಾಳೇಕುಂದ್ರಿ, ಉಪ ಮೇಯರ್ ರೇಣು ಕಿಲ್ಲೇಕರ ಹಾಗೂ ಸಭಾ ನಾಯಕ ಸಂಭಾಜಿ ಪಾಟೀಲ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಂಜಾನೆ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕರವೇಯ ಸುಮಾರು 20 ಕಾರ್ಯಕರ್ತರು ಆಮರಣ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ನಾಡದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೇಯರ್, ಉಪ ಮೇಯರ್ ಹಾಗೂ ಸಭಾ ನಾಯಕರ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಕರ್ನಾಟಕ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಂಡಿದ್ದ ಕರಾಳ ದಿನದ ಮೆರವಣಿಗೆಯಲ್ಲಿ ಪಾಲ್ಗೊಂಡು, ಕನ್ನಡ ನಾಡಿನ ವಿರುದ್ಧ ಮಾತನಾಡಿದ್ದ ಮೇಯರ್ ಮಂದಾ ಬಾಳೇಕುಂದ್ರಿ, ಉಪ ಮೇಯರ್ ರೇಣು ಕಿಲ್ಲೇಕರ ಹಾಗೂ ಸಭಾ ನಾಯಕ ಸಂಭಾಜಿ ಪಾಟೀಲರ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಉಪವಾಸನಿರತ ಕಾರ್ಯಕರ್ತರು ಮುಖ್ಯಮಂತ್ರಿ ಸದಾನಂದಗೌಡರನ್ನು ಒತ್ತಾಯಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, “ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಯಾವೊಂದೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಭಾಷಾ ರಾಜಕಾರಣ ನಡೆಸುತ್ತಿರುವ ಪಾಲಿಕೆಯ ಎಂಇಎಸ್ ಸದಸ್ಯರ ಸದಸ್ಯತ್ವವನ್ನು ವಜಾಗೊಳಿಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು” ಎಂದು ಆಗ್ರಹಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಕರವೇ ಕಾರ್ಯಕರ್ತರಾದ ಬಾಳು ಜಡಗಿ, ರಮೇಶ ತಳವಾರ, ಬಸವರಾಜ ಖಾನಪ್ಪನವರ, ಲಕ್ಷ್ಮಣ ಪಾಟೀಲ, ಶಫಿ ಜಮಾದಾರ, ಈರಪ್ಪ ಕಲ್ಲವಡ್ಡರ, ಫಕ್ಕೀರಪ್ಪ ಬಂಡಿವಡ್ಡರ, ರೇಖಾ ಲೋಕರಿ, ಸಾವಕ್ಕಾ ಮುದಕವಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.