ಬೆಂಗಳೂರು: ‘ಯಕ್ಷಗಾನ ಹಾಗೂ ಬಯಲಾಟಕ್ಕೆ ಸಂಬಂಧಿಸಿದ ಎಲ್ಲಾ ಎಂಟು ಕಲಾ ಪ್ರಕಾರಗಳಿಗೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವ ಅವಶ್ಯಕತೆ ಇದೆ’ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಕುಂಬಳೆ ಸುಂದರರಾವ್ ಅಭಿಪ್ರಾಯ ಪಟ್ಟರು.
ಅಕಾಡೆಮಿ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎರಡು ದಿನಗಳ ಯಕ್ಷರಂಗ ದರ್ಶನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಈ ಎಂಟು ಪ್ರಕಾರಗಳ ಬಗ್ಗೆ ಎಲ್ಲ ಪ್ರದೇಶದ ಜನರಿಗೂ ಅರಿವಿರುವುದಿಲ್ಲ. ಯಕ್ಷಗಾನವನ್ನು ಸವಿಯಲು ಕರಾವಳಿ-ಮಲೆನಾಡು ಹೇಳಿ ಮಾಡಿ ಸಿದ ತಾಣವಾದರೆ ಶ್ರೀಕೃಷ್ಣ ಪಾರಿಜಾತಕ್ಕೆ ಉತ್ತರ ಕರ್ನಾಟಕ ಪ್ರಶಸ್ತ ಸ್ಥಳವಾಗಿದೆ. ಈ ಎಲ್ಲಾ 8 ಪ್ರಕಾರ ಗಳಿಗೆ ಒಂದೊಂದು ಅಕಾಡೆಮಿ ಸ್ಥಾಪಿಸುವಷ್ಟು ಸಾಂಸ್ಕೃತಿಕ ಸಂಪತ್ತು ಇದೆ’ ಎಂದರು.
‘ವೇಷಗಾರಿಕೆ, ಬಣ್ಣಗಾರಿಕೆ, ಹಾಡು, ಭಾಷಾ ಪ್ರಯೋಗ, ನೃತ್ಯದ ವಿಚಾರದಲ್ಲಿ ಒಂದೊಂದು ಕಲಾ ಪ್ರಕಾರವೂ ಮತ್ತೊಂದಕ್ಕೆ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕಲೆಗೂ ಒಂದೊಂದು ಅಕಾಡೆಮಿ ಸ್ಥಾಪಿಸಿದರೆ ಎಲ್ಲಾ ಕಲಾ ಪ್ರಕಾರಗಳಿಗೂ ನ್ಯಾಯ ಒದಗಿಸಿದಂತಾಗುತ್ತದೆ’ ಎಂದರು. ‘ಕಲಾಪೋಷಕರಿಂದಾಗಿ ಹಾಗೂ ಅನನ್ಯ ಚಟುವಟಿಕೆಗಳಿಂದಾಗಿ ಯಕ್ಷ ಗಾನ ಕಲೆ ಉತ್ತಮ ಬೆಳವಣಿಗೆ ಕಂಡಿದೆ’ ಎಂದು ಅವರು ಹೇಳಿದರು.
‘ಯಕ್ಷಗಾನ ಬಯಲಾಟದ ಎಲ್ಲಾ ಕಲಾ ಪ್ರಕಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಜ್ಜೆ ಇರಿಸಿದೆ. ಕಲಾವಿದರಿಗೆ ಅಕಾಡೆಮಿ ವತಿಯಿಂದ 10 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಶೇಣಿ ಮಹಾಭಾರತದ ಪ್ರತಿಗಳನ್ನು ಮರು ಮುದ್ರಿಸಲಾಗುತ್ತಿದೆ’ ಎಂದರು. ಯಕ್ಷರಂಗದ ಕಲಾಪೋಷಕ ನಾಗಯ್ಯ ಶೆಟ್ಟಿ, ಯಕ್ಷಗಾನ ಕಲಾವಿದ ಹೆರಂಜಾಲು ಗೋಪಾಲ ಗಾಣಿಗ ಉಪಸ್ಥಿತರಿದ್ದರು. ನಂತರ ಕರ್ಣಾರ್ಜುನ ಕಾಳಗ, ಸಿಂಹ ನೃತ್ಯ ಹಾಗೂ ಪ್ರೇತ ನೃತ್ಯ, ಭೂ ಕೈಲಾಸ ದೊಡ್ಡಾಟವನ್ನು ಪ್ರದರ್ಶಿಸ ಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.