ಮಡಿಕೇರಿ: ಕಸ್ತೂರಿರಂಗನ್ ಸಮಿತಿ ಗುರುತಿಸಿರುವ ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯಿಂದ ಕೊಡಗಿನ 55 ಗ್ರಾಮಗಳನ್ನು ಕೈ ಬಿಡುವಂತೆ ವಿಧಾನ ಪರಿಷತ್ ಮಾಜಿ ಸದಸ್ಯಎ.ಕೆ. ಸುಬ್ಬಯ್ಯ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವಸತಿ ಇರುವ ಗ್ರಾಮಗಳು ಹಾಗೂ ಖಾಸಗಿ ಜಮೀನುಗಳನ್ನು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಅಭಿಪ್ರಾಯಪಟ್ಟರು.
ಪಶ್ಚಿಮಘಟ್ಟ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶವನ್ನು ಕಸ್ತೂರಿ ರಂಗನ್ ಸಮಿತಿಯು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಆಸ್ಪತ್ರೆ ತೆರೆಯದಂತೆ ಹಾಗೂ ಕೃಷಿಯಲ್ಲಿ ರಸಾಯನಿಕ ಪದಾರ್ಥ ಬಳಸದಂತೆ ನಿರ್ಬಂಧ ಹೇರಲಾಗಿದೆ. ವರದಿಯ ಶಿಫಾರಸು ಜಾರಿಗೆ ಬಂದರೆ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಹಾಗಾಗಿ, ಜನವಸತಿ ಇರುವ ಗ್ರಾಮಗಳನ್ನು ಹಾಗೂ ಖಾಸಗಿ ಜಮೀನುಗಳನ್ನು ಪರಿಸರ ಸೂಕ್ಷ್ಮವಲಯದಿಂದ ಕೈಬಿಡಬೇಕು ಎಂದು ಹೇಳಿದರು.
ಸಹಜವಾಗಿ ಬೆಳೆದಿರುವ ಅರಣ್ಯ ಪ್ರದೇಶವನ್ನು (ಅರಣ್ಯ ಕಾಯ್ದೆಗಳು ಜಾರಿಯಲ್ಲಿರುವಂತಹ ಪ್ರದೇಶ) ‘ನ್ಯಾಚುರಲ್ ಲ್ಯಾಂಡ್‌ಸ್ಕೇಪ್’ ಎಂದೂ ಹಾಗೂ ಖಾಸಗಿ ಜಾಗಗಳನ್ನು ‘ಕಲ್ಚರಲ್ ಲ್ಯಾಂಡ್‌ಸ್ಕೇಪ್’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇವೆರಡೂ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸಬೇಕು ಹಾಗೂ ‘ಕಲ್ಚರಲ್ ಲ್ಯಾಂಡ್‌ಸ್ಕೇಪ್’ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ವಿಷಯದಲ್ಲಿ ಈಗಾಗಲೇ ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅಲ್ಲಿರುವ ‘ಕಲ್ಚರಲ್ ಲ್ಯಾಂಡ್‌ಸ್ಕೇಪ್’ ಪ್ರದೇಶವನ್ನು ಸೂಕ್ಷ್ಮಪರಿಸರ ವಲಯದಿಂದ ವಿನಾಯಿತಿ ಪಡೆದುಕೊಂಡಿದೆ. ಇದೇ ಕ್ರಮವನ್ನು ಕರ್ನಾಟಕದ ಸರ್ಕಾರ ಕೂಡ ಮಾಡಬೇಕಾಗಿದೆ ಎಂದರು.
ಸಮಿತಿಯ ವರದಿಯನ್ನು ಸ್ವೀಕರಿಸಿರುವ ಕೇಂದ್ರ ಪರಿಸರ ಸಚಿವಾಲಯವು ಈಗಾಗಲೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ವರದಿಯ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರಗಳಿಗೆ 60 ದಿನಗಳ ಕಾಲಾವಕಾಶ ಕೂಡ ನೀಡಿದೆ.
ಈ ಅವಕಾಶವನ್ನು ರಾಜ್ಯ ಸರ್ಕಾರ ಉಪಯೋಗಿಸಿಕೊಂಡು, ತನ್ನ ವಾದವನ್ನು ಮಂಡಿಸಬೇಕಾಗಿದೆ ಎಂದು ಹೇಳಿದರು.
ಏನಿದು ವರದಿ?
ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ 1,600 ಕಿ.ಮೀ ಉದ್ದದಷ್ಟು ಪಶ್ಚಿಮಘಟ್ಟ ಹರಡಿಕೊಂಡಿದೆ. ಇಲ್ಲಿರುವ ಜೀವವೈವಿಧ್ಯ ಸಂರಕ್ಷಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು 6 ರಾಜ್ಯಗಳ 59,940 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಿತ್ತು. ಇದರಲ್ಲಿ ಕರ್ನಾಟಕದ 1,550 ಗ್ರಾಮಗಳು ಕೂಡ ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.