ADVERTISEMENT

ಕಾಂಗ್ರೆಸ್ ಗೆ 'ಎಡಗೈ ಒಳಏಟು' ಅಪಪ್ರಚಾರ- ಮುನಿಯಪ್ಪ

ಲೋಕಸಭಾ ಸದಸ್ಯ ಕೆ.ಎಚ್. ಮುನಿಯಪ್ಪ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ಕಾಂಗ್ರೆಸ್ ಗೆ 'ಎಡಗೈ ಒಳಏಟು' ಅಪಪ್ರಚಾರ- ಮುನಿಯಪ್ಪ
ಕಾಂಗ್ರೆಸ್ ಗೆ 'ಎಡಗೈ ಒಳಏಟು' ಅಪಪ್ರಚಾರ- ಮುನಿಯಪ್ಪ   

ನವದೆಹಲಿ: ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಯ 'ಎಡಗೈ' ಒಳಪಂಗಡ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿಲ್ಲ ಎಂಬುದು ಶುದ್ಧ ಅಪಪ್ರಚಾರ ಎಂದು ಆ ಪಕ್ಷದ ಹಿರಿಯ ಸಂಸದ ಕೆ.ಎಚ್.ಮುನಿಯಪ್ಪ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಡಗೈ ಒಳಪಂಗಡಕ್ಕೆ ಸೇರಿದ ಮುನಿಯಪ್ಪ ಎಂದಿನಂತೆ ಈ ಸಲವೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ. ‘ಎಡಗೈ ಒಳಪಂಗಡದ ಈ ಬೇಡಿಕೆಯನ್ನು ತುಳಿಯಲೆಂದೇ ಈ ಅಪಪ್ರಚಾರ ನಡೆದಿದ್ದು, ವರಿಷ್ಠರಿಗೆ ಈ ಸಂಗತಿಯನ್ನು ಮನವರಿಕೆ ಮಾಡಿದ್ದೇನೆ. ಅಗತ್ಯ ಬಿದ್ದರೆ ಸತ್ಯಶೋಧಕ ಸಮಿತಿಯೊಂದನ್ನು ರಾಜ್ಯಕ್ಕೆ ಕಳಿಸಿ ವಾಸ್ತವಾಂಶವನ್ನು ಪತ್ತೆ ಹಚ್ಚುವಂತೆ ಕೋರಿದ್ದೇನೆ’ ಎಂದು ಅವರು ಗುರುವಾರ 'ಪ್ರಜಾವಾಣಿ'ಗೆ ತಿಳಿಸಿದರು.

'ಎಡಗೈ ಒಳಪಂಗಡಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತಪ್ಪಿಸುತ್ತ ಬರಲಾಗುತ್ತಿದೆ. ಈ ಸಲ ನಮ್ಮ ಒಳಪಂಗಡ ಪಕ್ಷಕ್ಕೆ ಮತ ನೀಡಿಲ್ಲ ಎಂಬ ಪ್ರಚಾರ ಸತ್ಯಕ್ಕೆ ದೂರವಾದುದು. ಬೇಕಾದರೆ ಮತಗಟ್ಟೆವಾರು ಮತದಾನದ ವಿವರಗಳನ್ನು ಪರಿಶೀಲಿಸಬಹುದು. ಪರಿಶಿಷ್ಟ ಬಲಗೈ ಒಳಪಂಗಡಕ್ಕಿಂತ ಎಡಗೈ ಮತದಾರರ ಸಂಖ್ಯೆಯೇ ಹೆಚ್ಚು. ಬೆಂಗಳೂರು ಮತ್ತು ಕಲಬುರ್ಗಿ ವಿಭಾಗದಲ್ಲಿ ಈ ಒಳಪಂಗಡದ ಜನಾಂಗ ದೊಡ್ಡ ಸಂಖ್ಯೆಯಲ್ಲಿದೆ. ಈ ಎರಡೂ ವಿಭಾಗಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಮತ್ತೊಂದು ಒಳಪಂಗಡ ಭಾರೀ ಸಂಖ್ಯೆಯಲ್ಲಿರುವ ಮೈಸೂರು ವಿಭಾಗದಲ್ಲಿ ಕಾಂಗ್ರೆಸ್ ಸಾಧನೆ ಅಷ್ಟಕ್ಕಷ್ಟೇ. ಸದಾಶಿವ ವರದಿ ಜಾರಿಯಾಗಿಲ್ಲ ಮತ್ತು ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಆಗಿದೆಯೆಂದು ವಿಶೇಷವಾಗಿ ಮುಂಬೈ ಕರ್ನಾಟಕದ ಎಡಗೈ ಒಳಪಂಗಡ ಕಾಂಗ್ರೆಸ್ ಮೇಲೆ ಅಸಮಾಧಾನ ತೋರಿರುವುದು ನಿಜ. ಉತ್ತರ ಕರ್ನಾಟಕದಲ್ಲಿ ಈ ಒಳಪಂಗಡದ ಜನಸಂಖ್ಯೆ 30-40 ಸಾವಿರ ಇರುವ ಕಡೆ ಅವರಿಗೆ ಪಕ್ಷದ ಟಿಕೆಟ್ ನೀಡಲಿಲ್ಲ' ಎಂದು ಅವರು ವಿಶ್ಲೇಷಿಸಿದರು.

ADVERTISEMENT

'ಬೋವಿ, ಲಂಬಾಣಿ, ಮತ್ತು 'ಬಲಗೈ' ಒಳಪಂಗಡಕ್ಕೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ಸದಾಶಿವ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಒಪ್ಪುವುದು ಬಿಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಕನಿಷ್ಠ ಪಕ್ಷ ಶಿಫಾರಸು ಮಾಡಲು ಕೂಡ ತಯಾರಿಲ್ಲ ಅಂದರೆ ಏನು ಅರ್ಥ' ಎಂದು ಅವರು ಪ್ರಶ್ನಿಸಿದರು.

'ಏಳು ಸಲ ಸತತವಾಗಿ ಲೋಕಸಭೆಗೆ ಆರಿಸಿ ಬಂದಿದ್ದೇನೆ. ಇತರೆ ಜನಾಂಗಗಳು ಸಮುದಾಯಗಳೊಂದಿಗೆ ಸಾಮರಸ್ಯದಿಂದ ಇರದೆ ಹೋಗಿದ್ದರೆ ಈ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಭೂಸಾರಿಗೆ ಮತ್ತು ರೈಲ್ವೆ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನನಗೆ ದೊರೆಯಬೇಕು' ಎಂದು ಅವರು ವಾದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.