ADVERTISEMENT

ಕಾಮಗಾರಿಗೆ ₹136 ಕೋಟಿ ದುರ್ಬಳಕೆ

ಅಂಬರೀಷ್ ಬಿ
Published 2 ಜೂನ್ 2017, 19:47 IST
Last Updated 2 ಜೂನ್ 2017, 19:47 IST
ಕಾಮಗಾರಿಗೆ ₹136 ಕೋಟಿ ದುರ್ಬಳಕೆ
ಕಾಮಗಾರಿಗೆ ₹136 ಕೋಟಿ ದುರ್ಬಳಕೆ   

ಬೆಂಗಳೂರು: ಬೀದರ್‌ ಜಿಲ್ಲೆಯಲ್ಲಿ ₹ 136 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಮೂಲಸೌಲಭ್ಯ ಯೋಜನೆಯಲ್ಲಿ ಭಾರಿ ಹಗರಣ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿದೆ.

‘ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಕೆಟಿಪಿಟಿ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ) ಕಾಯ್ದೆ ಉಲ್ಲಂಘಿಸಲಾಗಿದೆ. ಅಲ್ಲದೆ, ಗುತ್ತಿಗೆದಾರರು ನಮೂದಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಲಾಗಿದೆ’ ಎಂದು ಲೋಕಾಯುಕ್ತ ಮುಖ್ಯ ಎಂಜಿನಿಯರ್‌ ಸಲ್ಲಿಸಿದ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

‘ರಾಜ್ಯ ಮತ್ತು ಕೇಂದ್ರ ಸರ್ಕಾರ 2008ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ಅನುದಾನವನ್ನು ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿ 2014ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ADVERTISEMENT

ದೂರಿಗೆ ಸಂಬಂಧಿಸಿದಂತೆ ಮುಖ್ಯ ಎಂಜಿನಿಯರ್‌ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ₹ 136 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡ ಸಂದರ್ಭದಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಜಿಲ್ಲಾಧಿಕಾರಿಯಾಗಿದ್ದರು.

ಗುರು ಗ್ರಂಥ ಸಾಹಿಬ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘ಗುರು–ತಾ– ಗದ್ದಿ’ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ನೆನಪಿಗೆ ಬೀದರ್‌ನಲ್ಲಿ ಮೂಲ
ಸೌಲಭ್ಯಗಳನ್ನು ಮೇಲ್ದರ್ಜೆ ಗೇರಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಮಹಾರಾಷ್ಟ್ರದ ನಾಂದೇಡ್‌ಗೆ ಲಕ್ಷಾಂತರ ಭಕ್ತರು ಭೇಟಿ ನೀಡುವ ಸಂದರ್ಭದಲ್ಲಿ ಬೀದರ್‌ನಲ್ಲಿರುವ ಗುರುದ್ವಾರ ಸಂಕೀರ್ಣ ಮತ್ತು ಇತರ ಕೇಂದ್ರಗಳಿಗೂ ಭಕ್ತರು ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಹೆಚ್ಚುವರಿ ನೆರವಿನಡಿ ಕೇಂದ್ರ ಸರ್ಕಾರ ₹ 136 ಕೋಟಿ ಬಿಡುಗಡೆ ಮಾಡಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

2015ರ ಏಪ್ರಿಲ್‌ನಲ್ಲಿ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದ ಮುಖ್ಯ ಎಂಜಿನಿಯರ್‌, ಎರಡು ಕಂತುಗಳಲ್ಲ ಹಣ ಬಿಡುಗಡೆ ಆಗಿರುವುದನ್ನು ಪತ್ತೆ ಮಾಡಿದ್ದರು. 2008 ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲಿ ₹ 40.82 ಕೋಟಿ ಮತ್ತು ₹ 95.20 ಕೋಟಿ ಬಿಡುಗಡೆ ಆಗಿತ್ತು. ‘ಕಾಮಗಾರಿಗಳ ಅನುಷ್ಠಾನಕ್ಕೆ ಕೆಟಿಪಿಟಿ ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರು ರಾಜ್ಯ ಸರ್ಕಾರವನ್ನು ಕೋರಿದ್ದರು. ಆದರೆ, ಸರ್ಕಾರ ಅದಕ್ಕೆ  ಒಪ್ಪಿಗೆ ನೀಡಿರಲಿಲ್ಲ. ಆದರೂ
₹ 5 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಕಾಮಗಾರಿಗಳನ್ನು ವಿಂಗಡಿಸಿ, ತುಂಡು ಗುತ್ತಿಗೆ ನೀಡಲಾಗಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಕೆಟಿಪಿಟಿ ಕಾಯ್ದೆಯಿಂದ ವಿನಾಯಿತಿ ಪಡೆಯುವ ಉದ್ದೇಶದಿಂದಲೇ ತುಂಡು ಗುತ್ತಿಗೆ ನೀಡಲಾಗಿತ್ತು. ಅಲ್ಲದೆ, ಅಲ್ಪಾವಧಿ ಗುತ್ತಿಗೆ ಆಹ್ವಾನಿಸಲಾಗಿತ್ತು. ಟೆಂಡರ್‌ನಲ್ಲಿ ಗುತ್ತಿಗೆದಾರರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ಜಿಲ್ಲಾಡಳಿತ ಮತ್ತೊಮ್ಮೆ ಟೆಂಡರ್‌ ಕರೆದಿರಲಿಲ್ಲ. ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಮಗಾರಿ ಹಂಚಲಾಗಿದೆ. ಬಿಡ್‌ ಮೊತ್ತಕ್ಕಿಂತ ಹೆಚ್ಚು ಹಣವನ್ನು ಕೆಲವು ಗುತ್ತಿಗೆದಾರರಿಗೆ ನೀಡಲಾಗಿದೆ ಎಂದೂ ವರದಿ ಆರೋಪಿಸಿದೆ.

2011ರ ಒಳಗೆ ₹ 114.89 ಕೋಟಿ ಮೊತ್ತದ ಕಾಮಗಾರಿಯನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿತ್ತು. ಆದರೆ, ಅದೇ ವರ್ಷ ಜನವರಿಯಲ್ಲಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಮತ್ತಷ್ಟು ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಕೈಗೆತ್ತಿಕೊಳ್ಳದಂತೆ ಸೂಚಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ‘ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ನೀಡಿದ್ದರೂ, ಈವರೆಗೂ ಯಾವುದೇ ಕಡತ ನನ್ನ ಮುಂದೆ ಬಂದಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ, ಗಂಭೀರ ಸಮಸ್ಯೆಗಳಿಲ್ಲದ ಯಾವುದೇ ಕಡತವನ್ನು ನನ್ನ ಬಳಿ ತರಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.