ಚಿತ್ರದುರ್ಗ: ನಗರದ ಆಡುಮಲ್ಲೇಶ್ವರದ ಕಿರುಮೃಗಾಯಲದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 13 ವರ್ಷದ ‘ಭೈರ’ ಹೆಸರಿನ ಚಿರತೆ ಮಂಗಳವಾರ ಮುಂಜಾನೆ ಮೃತಪಟ್ಟಿದೆ.
‘ಮೂತ್ರಪಿಂಡ ಮತ್ತು ಪಿತ್ತಜನಕಾಂಗಕ್ಕೆ ಸೋಂಕು ತಗುಲಿದ್ದ ಪರಿಣಾಮವಾಗಿ, ಚಿರತೆ ತೀರಾ ಅಸ್ವಸ್ಥಗೊಂಡು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಡಾ. ಇಂದಿರಾಬಾಯಿ ‘ಪತ್ರಿಕೆ’ಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ, ಕಿರುಮೃಗಾಲಯದ ಹಿಂಬದಿ ಚಿರತೆಯ ಅಂತ್ಯಕ್ರಿಯೆ ನಡೆಸಿದರು. ಪಶುವೈದ್ಯಾಧಿಕಾರಿ ಡಾ. ಮುರುಗೇಶ್, ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿ ಡಿ.ಮಾವಿನಹೊಳೆಯಪ್ಪ, ಡಿಆರ್‌ಎಫ್‌ಓ ಪ್ರದೀಪ್, ಮಂಜುಳಾ ಸೇರಿದಂತೆ ಮೃಗಾಲಯ ಸಿಬ್ಬಂದಿ ಹಾಜರಿದ್ದರು.
ಚಿರತೆ ಕಳೆದ 20 ದಿನಗಳಿಂದ ಅಸ್ವಸ್ಥಗೊಂಡಿತ್ತು. ಆಹಾರ ಸೇವಿಸುವುದಕ್ಕೆ ನಿರಾಕರಿಸುತ್ತಿತ್ತು.
ತಜ್ಞ ವೈದ್ಯರಿಂದ ಚಿಕಿತ್ಸೆ : ಬನ್ನೇರುಘಟ್ಟದ ವೈದ್ಯ ಡಾ. ಸುಜಯ್, ಶಿವಮೊಗ್ಗದ ಡಾ. ವಿನಯ್ ನೇತೃತ್ವದ ವೈದ್ಯರ ತಂಡ, ಸ್ಥಳೀಯ ವೈದ್ಯ ಡಾ. ಮುರುಗೇಶ್ ನೆರವಿನೊಂದಿಗೆ 20 ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದರು ಎಂದು ಆರ್‌ಎಫ್‌ಓ ಮಾವಿನಹೊಳಿ ತಿಳಿಸಿದರು.
ಆಡುಮಲ್ಲೇಶ್ವರ ಕಿರುಮೃ ಗಾಲಯ ದಲ್ಲಿ ಈಗ ಸಾವನ್ನಪ್ಪಿರುವ ಭೈರ ಸೇರಿ ದಂತೆ ಆರು ಚಿರತೆಗಳಿದ್ದವು. ಅದರಲ್ಲಿ 13 ವರ್ಷ ಮತ್ತು 12 ವರ್ಷದ ಎರಡು ಹೆಣ್ಣು ಚಿರತೆಗಳನ್ನು ಹೊರಗಿನಿಂದ ಮೃಗಾಲಯಕ್ಕೆ ತರಲಾಗಿತ್ತು. ಅದರಲ್ಲಿ ಈಗ ಒಂದು ಸಾವನ್ನಪ್ಪಿದೆ.
ಉಳಿದ ನಾಲ್ಕು ಚಿರತೆ ಮರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳ ಕಾಡಿನಲ್ಲಿ ಪತ್ತೆಯಾದವು. ಅದರಲ್ಲಿ ನಾಲ್ಕು ವರ್ಷದ ಜಾನು ಮತ್ತು ಸಾನ್ವಿ ಎಂಬ ಎರಡು ಹೆಣ್ಣು ಚಿರತೆಗಳು ಹಾಗೂ ಮೂರೂವರೆ ವರ್ಷದ ಗಂಡು ಚಿರತೆ ಭೀಮ ಸದ್ಯ ಮೃಗಾಲಯದಲ್ಲಿವೆ.
ಬೋನಿಗೆ ಬಿದ್ದ ಚಿರತೆ
ಕಂಪ್ಲಿ (ಬಳ್ಳಾರಿ ಜಿಲ್ಲೆ): ಸಮೀಪದ ಮೆಟ್ರಿ ಗ್ರಾಮದ ಕೆರೆ ಏರಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆಯೊಂದು ಮಂಗಳವಾರ ಸೆರೆಯಾಗಿದೆ.
ಒಂದೂವರೆ ವರ್ಷದ ಈ ಚಿರತೆ ನಸುಕಿನಲ್ಲಿ ಬೋನಿಗೆ ಬಿದ್ದಿದ್ದು, ಆರೋಗ್ಯವಾಗಿದೆ. ಇದನ್ನು ಮರಳಿ ಅರಣ್ಯಕ್ಕೆ ಬಿಡು ವುದೋ ಅಥವಾ ಯಾವುದಾ ದರೂ ಮೃಗಾಲಯಕ್ಕೆ ಕಳುಹಿಸು ವುದೋ ಎಂಬ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದರೋಜಿ ಕರಡಿಧಾಮ ವಲಯ ಅರಣ್ಯಾಧಿಕಾರಿ ಎಂ. ನಾಗರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.