ADVERTISEMENT

ಕಾವೇರಿ ವಿವಾದ: ಪ್ರಧಾನಿಯೊಂದಿಗೆ ಕಾಂಗ್ರೆಸ್ ನಾಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:40 IST
Last Updated 8 ಅಕ್ಟೋಬರ್ 2012, 8:40 IST

ನವದೆಹಲಿ (ಪಿಟಿಐ): ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯಾಗಿರುವುದನ್ನು ವಿರೋಧಿಸಿ ಕಾವೇರಿ ಜಲಾನಯಾನ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಪ್ರಧಾನಿ ಅವರನ್ನು ಭೇಟಿಯಾಗಿ ~ಕಾವೇರಿ~ ವಿವಾದ ಹಾಗೂ ಪ್ರಸ್ತುತ ವಸ್ತುಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು.

ಸುಪ್ರಿಂ ಕೋರ್ಟ್ ನಲ್ಲಿ ಕಾವೇರಿ ವಿವಾದ ವಿಚಾರಣೆಯು ಸೋಮವಾರ ನಡೆಯುವ ಬೆನ್ನಲ್ಲೇ ಪ್ರಧಾನಿ ಅವರೊಂದಿಗೆ ಹಿರಿಯ ನಾಯಕರು ಮಾತುಕತೆಯನ್ನು ನಡೆಸಿರುವುದು ವಿಶೇಷವಾಗಿದೆ.

ಪ್ರಧಾನಿ ಅವರ ಕಚೇರಿಯಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ರೈಲ್ವೆ ಖಾತೆ ಸಚಿವ ಕೆ.ಎಚ್. ಮುನಿಯಪ್ಪ, ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಾಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.

ADVERTISEMENT

~ಕಾವೇರಿ ಪ್ರತಿಭಟನೆ ಹಾಗೂ ಅಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವು ಇದೆ. ನಾವು ಕೂಡ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಈ ಬಗ್ಗೆ ಪ್ರಧಾನಿ ಅವರಲ್ಲಿ ಚರ್ಚಿಸಲಾಗಿದೆ. ತಜ್ಞರ ಸಮಿತಿ ತೀರ್ಮಾನ ಕೂಡ ಪ್ರಮುಖವಾಗಿರುತ್ತದೆ. ಸದ್ಯದಲ್ಲಿಯೇ ಸಮಸ್ಯೆಯು ಬಗೆಹರಿಯುವ ವಿಶ್ವಾಸವಿದೆ~ ಎಂದು ಖರ್ಗೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಾವೇರಿ ಕೊಳ್ಳದ ಪ್ರದೇಶದಲ್ಲಿನ ಬೆಳೆಗಳಿಗೆ ಹಾಗೂ ಆ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ವಸ್ತು ಸ್ಥಿತಿಯನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.


 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.