ADVERTISEMENT

ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಮೈಸೂರು: ರಾಜ್ಯದಲ್ಲಿರುವ ಆರು ಕಿರು ಪ್ರಾಣಿ ಸಂಗ್ರಹಾಲಯ (ಮಿನಿ ಝೂ)ಗಳನ್ನು ಹೆಚ್ಚು ಜನಾಕರ್ಷಣೆ ಕೇಂದ್ರಗಳನ್ನಾಗಿ ರೂಪಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ.

ಬಳ್ಳಾರಿಯ ಕಿರು ಪ್ರಾಣಿ ಸಂಗ್ರಹಾಲಯ, ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮ, ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ  ಪ್ರಾಣಿ ಸಂಗ್ರಹಾಲಯ, ಗದಗ್‌ನ ಬಿಂಕದಕಟ್ಟೆ ಮೃಗಾಲಯ, ಗುಲ್ಬರ್ಗಾದ ಕಿರು ಪ್ರಾಣಿ ಸಂಗ್ರಹಾಲಯ ಮತ್ತು ಬಾಲವನ, ಶಿವಮೊಗ್ಗದ ತಾವರೆಕೊಪ್ಪ ಹುಲಿ ಸಿಂಹಧಾಮಗಳನ್ನು ಅಭಿವೃದ್ಧಿ ಪಡಿಸಿ ಹೆಚ್ಚು ಹೆಚ್ಚು ಜನರನ್ನು ಇವುಗಳತ್ತ ಸೆಳೆಯಲು ಪ್ರಾಧಿಕಾರವು ಹೆಜ್ಜೆ ಇಟ್ಟಿದೆ.

ಈ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆಗಳು, ಚುಕ್ಕಿ ಜಿಂಕೆಗಳು, ಸಾರಂಗ, ಮೊಸಳೆಗಳು, ಹುಲಿ, ಹೈನಾ, ಮೂರು ಜಾತಿಯ ಕೋತಿಗಳು, ನರಿಗಳು, ನವಿಲುಗಳು ಹಾಗೂ ಹಲವು ಬಗೆಯ ಪಕ್ಷಿಗಳು ಇವೆ. ಇವುಗಳಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾಗಿದೆ.

ಕಿರು ಪ್ರಾಣಿ ಸಂಗ್ರಹಾಲಯದಲ್ಲಿ 100 ರಿಂದ 150 ರಷ್ಟು ಜಿಂಕೆಗಳಿವೆ. ಈ ಸಂಖ್ಯೆಯು ಭಾರತದಲ್ಲೇ ಹೆಸರಾಗಿರುವ ಮೈಸೂರು ಮೃಗಾಲಯದಲ್ಲಿರುವ ಜಿಂಕೆಗಳಿಗೆ ಸಮನಾಗಿದೆ.

ಪ್ರಾಧಿಕಾರವು ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿ, ಪಕ್ಷಿಗಳ ಮನೆ ನಿರ್ಮಾಣ ಕಾರ್ಯ ಕೈಗೊಂಡಿದೆ. ಬಳ್ಳಾರಿ ಮತ್ತು ಬೆಳಗಾವಿ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಕ್ರಮವಾಗಿ 38.74 ಲಕ್ಷ, ಬೆಳಗಾವಿಗೆ 25 ಲಕ್ಷ ಅನುದಾನ ನೀಡಲಾಗಿದೆ. ತಾವರೆಕೊಪ್ಪ ಹುಲಿ ಸಿಂಹಧಾಮದ  ಸುಧಾರಣೆಗೆ 73 ಲಕ್ಷ ಅನುದಾನ ನೀಡಿದೆ.

ಆದಾಯಕ್ಕಿಂತ ಖರ್ಚು ಹೆಚ್ಚು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ಖರ್ಚಿಗಿಂತ ಆದಾಯ ಹೆಚ್ಚಾಗಿದೆ. ಇವೆರಡನ್ನು ಹೊರತುಪಡಿಸಿದರೆ ಉಳಿದ ಆರು ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಖರ್ಚು ಹೆಚ್ಚಾಗಿದೆ.

ಈ ಸಂಗ್ರಹಾಲಯಗಳಲ್ಲಿರುವ   ಪ್ರಾಣಿ, ಪಕ್ಷಿಗಳ ಆಹಾರ ಪೂರೈಕೆ, ನಿರ್ವಹಣೆ, ಸಿಬ್ಬಂದಿ ಸಂಬಳ, ಚಿಕಿತ್ಸೆ ಇತ್ಯಾದಿ ಸೇರಿ ವಾರ್ಷಿಕ 1.5 ಕೋಟಿ ಖರ್ಚಾಗುತ್ತಿದೆ. ಈ ಹಣದಲ್ಲಿ  ಶೇಕಡಾ 50 ರಷ್ಟು ಪ್ರಾಣಿ, ಪಕ್ಷಿಗಳ ಆಹಾರಕ್ಕೆ ಬಳಕೆಯಾಗುತ್ತಿದೆ. ದಾವಣಗೆರೆ ಸಂಗ್ರಹಾಲಯದಲ್ಲಿ 14 ಲಕ್ಷ ಖರ್ಚು, 2.02 ಲಕ್ಷ ಆದಾಯವಿದೆ. ಗದಗದಲ್ಲಿ 45 ಲಕ್ಷ ವೆಚ್ಚ, 6.60 ಲಕ್ಷ ಆದಾಯವಿದ್ದರೆ, ಗುಲ್ಬರ್ಗಾದಲ್ಲಿ 21 ಲಕ್ಷ ಖರ್ಚು, 4.75 ಲಕ್ಷ ಆದಾಯವಿದೆ.

~ಕಿರು ಪ್ರಾಣಿ ಸಂಗ್ರಹಾಲಯಗಳಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿದೆ. ಆದರೆ ಈ ಕಾರಣಕ್ಕಾಗಿ ಮುಚ್ಚಲು ಆಗುವುದಿಲ್ಲ. ಏಕೆಂದರೆ ಜನರಿಂದ  ವ್ಯಾಪಕ ವಿರೋಧವಿದೆ. ಆದ್ದರಿಂದ ಪ್ರಾಧಿಕಾರ ಇವುಗಳನ್ನು ಇನ್ನಷ್ಟು ಆಕರ್ಷಣೀಯಗೊಳಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಿದೆ.   ಈಗಾಗಲೇ ಬಳ್ಳಾರಿ ಮತ್ತು ಗುಲ್ಬರ್ಗಾ ಸಂಗ್ರಹಾಲಯಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಅರಿತಿದ್ದೇನೆ~ ಎನ್ನುತ್ತಾರೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ.

ಬಳ್ಳಾರಿ ಮೃಗಾಲಯ ಸ್ಥಳಾಂತರ: ಬಳ್ಳಾರಿ ನಗರದಲ್ಲಿರುವ ಕಿರು ಪ್ರಾಣಿ ಸಂಗ್ರಹಾಲಯವನ್ನು ಹೊರ ವಲಯದಲ್ಲಿರುವ ಬಿಳಿಕಲ್ಲು ಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಾಧಿಕಾರ ನಿರ್ಧರಿಸಿದೆ.

ಇದಕ್ಕಾಗಿ 250 ಎಕರೆ ಭೂಮಿ ಮಂಜೂರಾಗಿದ್ದು ಸರ್ವೆ ಸಹ ಆಗಿದೆ. ಪ್ರಾಧಿಕಾರವು ಎರಡು ವರ್ಷಗಳ ಹಿಂದೆ 20 ಕೋಟಿ ರೂಪಾಯಿ ಅಂದಾಜು ವೆಚ್ಚಪಟ್ಟಿಯನ್ನು ತಯಾರಿಸಿತ್ತು. ಇವಿಷ್ಟು ಅಂದಿನ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿಯವರ ಪರಿಶ್ರಮದಿಂದ  ಆಗಿತ್ತು. ಆದರೆ ಸ್ಥಳಾಂತರ ಕಾರ್ಯಕ್ಕೆ ಚಾಲನೆ ದೊರಕಿರಲಿಲ್ಲ.
ಈಗ ಅಂದಾಜು ವೆಚ್ಚವನ್ನು ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸದ ಕೂಡಲೇ ಟೆಂಡರ್ ಕರೆಯಲು ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.