ADVERTISEMENT

ಕುಂಭ ಮೇಳ ಆರಂಭ

ತಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 12:29 IST
Last Updated 24 ಫೆಬ್ರುವರಿ 2013, 12:29 IST
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಶನಿವಾರ ಆರಂಭವಾದ 9ನೇ ಕುಂಭಮೇಳದಲ್ಲಿ   ಭಾಗವಹಿಸಲು ನದಿಯ ಮಧ್ಯೆಯೇ ಭಕ್ತರು ಹೆಜ್ಜೆ ಹಾಕಿದರು
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಶನಿವಾರ ಆರಂಭವಾದ 9ನೇ ಕುಂಭಮೇಳದಲ್ಲಿ ಭಾಗವಹಿಸಲು ನದಿಯ ಮಧ್ಯೆಯೇ ಭಕ್ತರು ಹೆಜ್ಜೆ ಹಾಕಿದರು   

ಮೈಸೂರು:  ತ್ರಿವೇಣಿ ಸಂಗಮದತ್ತ ಹರಿದು ಬಂದ ಜನ... ಸಾಧು, ಸಂತರ ಆಗಮನ... ಪುಣ್ಯನದಿಯ ನೀರು ಸ್ಪರ್ಶಿಸಿ, ದೇವರ ದರ್ಶನ ಪಡೆದು ಪುನೀತರಾದ ಭಕ್ತರು... ಪುಣ್ಯಸ್ನಾನದಲ್ಲಿ ಭಾಗವಹಿಸಲು ನಾನಾ ಮೂಲೆಯಿಂದ ಸೇರಿದ ಆಸ್ತಿಕ ವರ್ಗ...ಇವು ತಿ.ನರಸೀಪುರ ತಾಲ್ಲೂಕು ತ್ರಿವೇಣಿ ಸಂಗಮದಲ್ಲಿ ಶನಿವಾರ ಆರಂಭವಾದ 9ನೇ ಕುಂಭಮೇಳದಲ್ಲಿ ಕಂಡು ಬಂದ ದೃಶ್ಯಗಳು.

ದಕ್ಷಿಣ ಭಾರತದ ಏಕೈಕ ಕುಂಭಮೇಳ ನಡೆಯುವ ಸ್ಥಳ ಎಂದೇ ಖ್ಯಾತವಾಗಿರುವ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಸಾಧು, ಸಂತರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. 1989 ರಿಂದ ಆರಂಭವಾದ ಕುಂಭಮೇಳ, ಈಚೆಗೆ ಅಗಲಿದ ಆದಿಚುಂಚನಗಿರಿಯ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸು.

ತಿರುಮಕೂಡಲಿನಲ್ಲಿ ಕಾವೇರಿ ಮತ್ತು ಕಪಿಲಾ ನದಿಗಳ ಸಂಗಮವಿದೆ. ಉತ್ತರ ಭಾರತದ ಅಲಹಾಬಾದ್‌ನ ಪ್ರಯಾಗದಲ್ಲಿ ನಡೆಯುವ ಕುಂಭಮೇಳ ಮಾದರಿಯಲ್ಲೇ ದಕ್ಷಿಣ ಕರ್ನಾಟಕದಲ್ಲೂ ಕುಂಭಮೇಳ ಆಯೋಜಿಸಬೇಕು ಎಂದು ಯೋಚಿಸಿದ್ದ ಅವರು ತಿರುಮಕೂಡಲಿನಲ್ಲಿ ಚಾಲನೆ ನೀಡಿದ್ದರು.

ಮೂರು ದಿನಗಳ ಕಾಲ ನಡೆಯಲಿರುವ ಕುಂಭಮೇಳದ ಕೊನೆಯ ದಿನವಾದ ಸೋಮವಾರ (ಫೆ. 25) ಪುಣ್ಯಸ್ನಾನ ನಡೆಯಲಿದೆ.

ಆ ದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುವರು. ಇದಕ್ಕಾಗಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದ್ದು, ನದಿಯ ಮಧ್ಯೆ ಆಳವಾದ ಗುಂಡಿ ಇರುವಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ವಿಧ್ಯುಕ್ತ ಚಾಲನೆ:9ನೇ ಮಹಾ ಕುಂಭಮೇಳಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆಯ ಶಿವಾನಂದಪುರಿ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.