ಬೆಂಗಳೂರು: ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚನ್ನಿಗಪ್ಪ, ಭೂಮಿಯ ಮಾಲೀಕರಾದ ಡಾ.ರವಿಪ್ರಕಾಶ್, ಎ.ವಿ.ಶ್ರೀರಾಂ ಮತ್ತಿತರರು ಅಕ್ರಮ ಎಸಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯ ಮಹದೇವಸ್ವಾಮಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಜನವರಿ 6ರಂದು ಆದೇಶಿಸಿತ್ತು.
ಸೋಮವಾರ ನ್ಯಾಯಾಲಯಕ್ಕೆ ಹಾಜರಾದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಕೆ.ರವಿಶಂಕರ್, 52 ಪುಟಗಳ ಅಂತಿಮ ವರದಿ ಮತ್ತು 1500 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದರು. ಪ್ರಕರಣದ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಅದೇ ದಿನ ಮುಂದಿನ ಪ್ರಕ್ರಿಯೆ ಕುರಿತು ಆದೇಶ ನೀಡುವುದಾಗಿ ತಿಳಿಸಿದರು.
ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಪೂರ್ವ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂಬರ್ 87/4`ಬಿ~ಯಲ್ಲಿ 3.08 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2003ರ ಫೆಬ್ರುವರಿ 3ರಂದು ಪ್ರಾಥಮಿಕ ಅಧಿಸೂಚನೆ ಪ್ರಕಟಿಸಿತ್ತು.
2003ರ ಮಾರ್ಚ್ 15ರಂದು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ಭೂಮಿಯ ಮಾಲೀಕರಾದ ಡಾ.ಎ.ವಿ.ರವಿಪ್ರಕಾಶ್ ಮತ್ತು ಎ.ವಿ.ಶ್ರೀರಾಂ, `ನಾವು ತೀರಾ ಬಡವರಾಗಿದ್ದು ಈ ಜಮೀನನ್ನು ಹೊರತುಪಡಿಸಿ ನಮಗೆ ಬೇರಾವುದೇ ಭೂಮಿ ಅಥವಾ ಆಸ್ತಿ ಇಲ್ಲ. ಇದನ್ನೇ ಅವಲಂಬಿಸಿದ್ದೇವೆ. ಆದ್ದರಿಂದ ಈ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು~ ಎಂದು ಬಿಡಿಎಗೆ ಮನವಿ ಸಲ್ಲಿಸಿದ್ದರು.
ಆಕ್ಷೇಪಣೆಯನ್ನು ತಿರಸ್ಕರಿಸಿದ್ದ ಬಿಡಿಎ, 2004ರ ಫೆ. 23ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷದ ಸೆಪ್ಟೆಂಬರ್ 17ರಂದು ಭೂಮಿಗೆ ಪರಿಹಾರವನ್ನೂ ನಿಗದಿ ಮಾಡಲಾಗಿತ್ತು. ನವೆಂಬರ್ 11ರಂದು ಬಿಡಿಎ ಎಂಜಿನಿಯರಿಂಗ್ ವಿಭಾಗ ಭೂಮಿಯನ್ನು ತನ್ನ ವಶಕ್ಕೆ ಪಡೆದಿತ್ತು. 2006ರ ಜೂನ್‌ನಿಂದ 2007ರ ಮಾರ್ಚ್ ಅವಧಿಯಲ್ಲಿ ಈ ಭೂಮಿಯಲ್ಲಿ 57 ನಿವೇಶನಗಳುಳ್ಳ ಬಡಾವಣೆ ನಿರ್ಮಿಸಲಾಗಿತ್ತು.
ಈ ಪೈಕಿ 44 ನಿವೇಶನಗಳನ್ನು ಅರ್ಜಿದಾರರಿಗೆ ಬಿಡಿಎ ಹಂಚಿಕೆ ಮಾಡಿತ್ತು. ಸಂಖ್ಯೆ 2ರ ನಿವೇಶನ ಖರೀದಿಸಿದ್ದ ನಾಯರ್ ಎಂಬುವರು ತ್ರಿವೇಂಡ್ರಂ ಬ್ಯಾಂಕ್‌ನಿಂದ ಸಾಲ ಪಡೆದು ಮನೆಯನ್ನೂ ನಿರ್ಮಿಸಿದ್ದರು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಅರಣ್ಯ ಸಚಿವರ ಶಿಫಾರಸು: 2007ರಲ್ಲಿ ಚನ್ನಿಗಪ್ಪ ಅವರು ಅರಣ್ಯ ಸಚಿವರಾಗಿದ್ದರು. 2007ರ ಏಪ್ರಿಲ್ 5ರಂದು ಮಲ್ಲೇಶ್ವರದ ಅರಣ್ಯ ಅತಿಥಿಗೃಹದಲ್ಲಿ ಅವರನ್ನು ಭೇಟಿಮಾಡಿದ ರವಿಪ್ರಕಾಶ್ ಮತ್ತು ಶ್ರೀರಾಂ, ಥಣಿಸಂದ್ರದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಸುತ್ತಾರೆ.
ಬಿಡಿಎಗೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿದ್ದಂತೆ, `ಇವರು ತೀರಾ ಬಡವರು, ಬೇರಾವುದೇ ಆಸ್ತಿಯೂ ಇಲ್ಲ~ ಎಂಬ ಒಕ್ಕಣೆಯೊಂದಿಗೆ ಪತ್ರ ರವಾನೆಯಾಗುತ್ತದೆ. ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ವರದಿ ಕೋರಿದ್ದರು.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಿದ ಆಗಿನ ಬಿಡಿಎ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, `3.08 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಸಂಬಂಧ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಪರಿಹಾರದ ಮೊತ್ತ ನಿಗದಿ ಮಾಡಿ ಐತೀರ್ಪನ್ನೂ ಹೊರಡಿಸಲಾಗಿದೆ~ ಎಂದು ತಿಳಿಸಿದ್ದರು.
ಈ ಕಡತವನ್ನು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿ ಮುಂದೆ ಮಂಡಿಸಲು ಶಿಫಾರಸು ಮಾಡಲಾಗಿತ್ತು. ನಂತರ ಕಡತವನ್ನು ಸಮಿತಿಯ ಮುಂದಿಡಲಾಗಿತ್ತು.ಉನ್ನತಾಧಿಕಾರ ಸಮಿತಿಯ ಸದಸ್ಯರೂ ಆಗಿದ್ದ ನಗರಾಭಿವೃದ್ಧಿ ಇಲಾಖೆಯ ಆಗಿನ ಪ್ರಧಾನ ಕಾರ್ಯದರ್ಶಿ (ಈಗ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ) ಕೆ.ಜ್ಯೋತಿರಾಮಲಿಂಗಂ, `ಮುಖ್ಯಮಂತ್ರಿಯವರು ಈ ಕಡತವನ್ನು ಕೇಳಿದ್ದಾರೆ~ ಎಂಬ ಉಲ್ಲೇಖದೊಂದಿಗೆ ಕಡತವನ್ನು ಕೊಂಡೊಯ್ದಿದ್ದಾರೆ. ನಂತರ ಕುಮಾರಸ್ವಾಮಿ ಅವರು ನೇರವಾಗಿ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಆದೇಶ ಹೊರಡಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಿಗೆ ಬಂದಿದೆ.
ಬಡವರಲ್ಲ ಬಲಾಢ್ಯರು!: ರವಿಪ್ರಕಾಶ್ ಮತ್ತು ಶ್ರೀರಾಂ ಮಿಂಟೊ ಕಣ್ಣಿನ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ವೆಂಕಟರಾಮ್ ಅವರ ಪುತ್ರರು. ಒಬ್ಬರು ವೈದ್ಯರಾದರೆ ಮತ್ತೊಬ್ಬರು ಎಂಜಿನಿಯರ್. ಅವರು ಬಡವರಲ್ಲ. ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆ, ಬನಶಂಕರಿ ಮತ್ತಿತರ ಪ್ರದೇಶಗಳಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಅರ್ಕಾವತಿ ಬಡಾವಣೆಯ ವ್ಯಾಪ್ತಿಯಲ್ಲೇ ಇನ್ನೂ 8.13 ಎಕರೆ ಭೂಮಿ ಹೊಂದಿದ್ದರು. ದೇವನಹಳ್ಳಿ ಬಳಿಯೂ ತೋಟ ಮತ್ತು ಇತರೆ ಆಸ್ತಿಗಳಿವೆ. ಇವರು ಚನ್ನಿಗಪ್ಪ ಅವರಿಗೆ ಪರಿಚಿತರಾಗಿದ್ದು, ಎಲ್ಲ ವಿಷಯಗಳೂ ಅವರಿಗೆ ತಿಳಿದಿತ್ತು. ಆದರೆ, ಬಡವರು ಎಂದು ಸುಳ್ಳು ಮಾಹಿತಿ ನೀಡಲಾಗಿತ್ತು ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಚನ್ನಿಗಪ್ಪ, ಸುಳ್ಳು ಮಾಹಿತಿಯುಳ್ಳ ಶಿಫಾರಸು ಪತ್ರ ನೀಡಿ ಸರ್ಕಾರವನ್ನು ವಂಚಿಸಿದ್ದಾರೆ. ಥಣಿಸಂದ್ರದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದೂ ಕುಮಾರಸ್ವಾಮಿ ಅವರು ಕಾನೂನುಬಾಹಿರ ಆದೇಶ ಹೊರಡಿಸಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಇಂತಹ ಆದೇಶ ಹೊರಡಿಸಲಾಗಿದೆ ಎಂಬ ವಿವರ ವರದಿಯಲ್ಲಿದೆ.
`ಸುಳ್ಳು ಮಾಹಿತಿ ನೀಡಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆದ ಬಳಿಕ ಆ ಸ್ವತ್ತನ್ನು ರವಿಪ್ರಕಾಶ್ ಮತ್ತು ಶ್ರೀರಾಂ ಅವರು ಶ್ರೀನಿವಾಸ ರಾಜು ಎಂಬುವರಿಗೆ 2.56 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಭೂಮಿಗೆ 44 ಲಕ್ಷ ರೂಪಾಯಿ ಪರಿಹಾರ ನಿಗದಿ ಮಾಡಲಾಗಿತ್ತು. ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ. ಬಿಡಿಎಗೆ ರೂ 4.76 ಲಕ್ಷ ನಷ್ಟ ಉಂಟುಮಾಡಿದ್ದು, ಪ್ರಾಧಿಕಾರದಿಂದ ನಿವೇಶನ ಪಡೆದಿದ್ದ 44 ಜನರಿಗೆ ಮೋಸ ಮಾಡಲಾಗಿದೆ~ ಎಂದು ತನಿಖಾ ವರದಿಯಲ್ಲಿ ಆರೋಪಿಸಲಾಗಿದೆ.
ಯಾರು ಯಾರ ವಿರುದ್ಧ ಏನೇನು? |
ಕುಮಾರಸ್ವಾಮಿ ಮತ್ತು ಚನ್ನಿಗಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1) (ಡಿ) ಮತ್ತು 13(2)- (ಅಧಿಕಾರ ದುರ್ಬಳಕೆ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ರವಿಪ್ರಕಾಶ್ ಮತ್ತು ಶ್ರೀರಾಂ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 420 (ವಂಚನೆ), 120-ಬಿ (ಒಳಸಂಚು) ಮತ್ತು 198 (ಸುಳ್ಳು ಮಾಹಿತಿ ನೀಡಿರುವುದು) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಜ್ಯೋತಿರಾಮಲಿಂಗಂ ಪಾತ್ರ ಕುರಿತು ವರದಿಯಲ್ಲಿ ವಿವರ ನೀಡಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ಬಳಿಕ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. |
ಬಂಧನದ ಭೀತಿಯಲ್ಲಿ... |
ಥಣಿಸಂದ್ರ ಗ್ರಾಮದಲ್ಲಿನ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೈಕೋರ್ಟ್‌ಗೆ ಸೋಮವಾರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರ ವಿರುದ್ಧ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತಿದ್ದಂತೆ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂಬ ಭಯದಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸದಂತೆ ಆದೇಶಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ. ಇದು ಮಂಗಳವಾರ ವಿಚಾರಣೆಗೆ ಬರಲಿದೆ. |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.