ADVERTISEMENT

ಕುರ್ಚಿಗಳ ತೂರಾಟ: ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST
ಕುರ್ಚಿಗಳ ತೂರಾಟ: ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ಕುರ್ಚಿಗಳ ತೂರಾಟ: ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ   

ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿ ಶನಿವಾರ ಅಪ್ಪಟ ರಣರಂಗವಾಗಿ ಪರಿವರ್ತನೆಗೊಂಡಿತು. ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಕುರ್ಚಿಗಳಿಂದ ಹೊಡೆದಾಡಿದರು. ಈ ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು. ಈ ದಾಂಧಲೆಯಲ್ಲಿ ಕೈಗೆ ಸಿಕ್ಕ ಪೀಠೋಪಕರಣಗಳನ್ನು ಸಹ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಚಿತ್ರದುರ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಈ ಅಹಿತಕರ ಘಟನೆ ನಡೆಯಿತು.

ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಒಂದು ಗುಂಪು ಕಚೇರಿಗೆ ಆಗಮಿಸುತ್ತಿದ್ದ ಜಿಲ್ಲಾ ಅಧ್ಯಕ್ಷ ಎಂ.ಎ. ಸೇತುರಾಂ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿತು. ಅಧ್ಯಕ್ಷರು, ಕಾರ್ಯಕರ್ತರು ಸಮಾಧಾನ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಆಗ ಸೇತುರಾಂ ಅವರು ಪಕ್ಷದ ರಾಜ್ಯದ ವರಿಷ್ಠರಿಗೆ ದೂರವಾಣಿ ಕರೆ ಮಾಡಿ ಅಭಿಪ್ರಾಯ ಕೋರಿದರು. ಈಗ ಕಾರ್ಯಕ್ರಮ ಬೇಡ ಎಂದು ವರಿಷ್ಠರು ಸೂಚಿಸಿದ್ದಾರೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಆದರೆ, ಇನ್ನೊಂದು ಗುಂಪು ಜಿಲ್ಲಾ ಅಧ್ಯಕ್ಷರ ಮಾತಿಗೆ ಸೊಪ್ಪು ಹಾಕದೆ, `ಕಾಂಗ್ರೆಸ್ ಯಾರ ಸ್ವತ್ತೂ ಅಲ್ಲ~ ಎಂದು ಪ್ರತಿಪಾದಿಸಿ ಕಾರ್ಯಕ್ರಮ ಆರಂಭಿಸಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಆರ್. ಪ್ರಕಾಶ್ ಅವರಿಗೆ ಪಕ್ಷದ ಮುಖಂಡ ಡಾ.ಬಿ. ತಿಪ್ಪೇಸ್ವಾಮಿ ಪಕ್ಷದ ಧ್ವಜ ನೀಡುತ್ತಿದ್ದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಧಿಕ್ಕಾರ ಹಾಕುತ್ತ ಏಕಾಏಕಿ ಕಾರ್ಯಾಲಯಕ್ಕೆ ನುಗ್ಗಿದ ಸಿದ್ದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮರಾಜು ಧ್ವಜವನ್ನು ಕಿತ್ತೆಸೆದರು.
 
ಇದರಿಂದ ಕುಪಿತಗೊಂಡ ಕಾರ್ಯಕರ್ತರು ಭೀಮರಾಜು ಅವರನ್ನು ಹಿಗ್ಗಾಮುಗ್ಗ ಥಳಿಸಿ ಕಾರ್ಯಾಲಯದಿಂದ ಹೊರ ನೂಕಿದಾಗ ಎರಡು ಗುಂಪಿನ ನಡುವೆ ಮಾರಾಮಾರಿ ನಡೆಯಿತು. ಕುರ್ಚಿಗಳನ್ನು ಎತ್ತಿ ಹೊಡೆದಾಡಿದರು.

ಮಾಜಿ ಶಾಸಕ ಎಚ್. ಆಂಜನೇಯ ಅವರ ಬೆಂಬಲಿಗ ಭೀಮರಾಜು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರು ಪ್ರಕಾಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದರು. ಇದರಿಂದ  ಕುಪಿತಗೊಂಡ ಭೀಮರಾಜು ತನ್ನ ಬೆಂಬಲಿಗರೊಂದಿಗೆ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ನುಗ್ಗಿ ಪಕ್ಷದ ಧ್ವಜವನ್ನು ಕಿತ್ತೆಸೆದಾಗ ಡಾ.ಬಿ. ತಿಪ್ಪೇಸ್ವಾಮಿ ಗುಂಪಿನವರು ಭೀಮರಾಜು ಅವರನ್ನು ಕುರ್ಚಿಗಳಿಂದ ಹೊಡೆದರು.

ಪರಿಸ್ಥಿತಿ ಕೈ ಮೀರುವ ಹಂತ ತಲುಪಿತು. ಕುರ್ಚಿ ತೂರಾಟದಲ್ಲಿ ಹಲವು ಕಾರ್ಯಕರ್ತರು ಮತ್ತು ಒಬ್ಬ ಪತ್ರಿಕಾ ಛಾಯಾಗ್ರಾಹಕರು ಸಹ ಗಾಯಗೊಂಡರು. ಸಮಾರಂಭದಲ್ಲಿ ಅನೇಕ ಮುಖಂಡರು ಹಾಜರಿದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಮೂಕ ಪ್ರೇಕ್ಷಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.