ADVERTISEMENT

ಕೂಡಲಸಂಗಮ: ಬಾಲಕನ ಶವ ಪತ್ತೆ

ಮಕ್ಕಳ ಕಳ್ಳರು ಬಂದಿರುವ ವದಂತಿ; ಆತಂಕದಲ್ಲಿ ಗ್ರಾಮೀಣರು

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಸತೀಶ
ಸತೀಶ   

ಬಾಗಲಕೋಟೆ: ಜಿಲ್ಲೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಕಳೆದೊಂದು ವಾರದಿಂದ ಹರಡಿದೆ. ಇದರ ಮಧ್ಯೆ ಹುನಗುಂದ ತಾಲ್ಲೂಕು ಕೂಡಲಸಂಗಮದಲ್ಲಿ ಕಾಣೆಯಾಗಿದ್ದ ಶಾಲಾ ಬಾಲಕನ ಶವ, ಕೈ –ಕಾಲು ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯವಾಗಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಗ್ರಾಮದ ಗಿರಿಯಪ್ಪ ಪೂಜಾರಿ ಎಂಬುವವರ ಮಗ ಸತೀಶ (14) ಮೇ 13ರಂದು ಸಂಜೆ ಮನೆಯಿಂದ ಕಾಣೆಯಾಗಿದ್ದ. ಆಗಿನಿಂದಲೂ ಪೋಷಕರು ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಶುಕ್ರವಾರ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಗ್ರಾಮದ ಬಸ್‌ ನಿಲ್ದಾಣದ ಹಿಂಭಾಗದ ಸ್ಮಶಾನದಲ್ಲಿ ಸಿಕ್ಕಿದೆ.

ಆತಂಕ ಹೆಚ್ಚಳ: ‘ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ. ಅವರು, ಮಕ್ಕಳನ್ನು ಅಪಹರಿಸಿ ಕೊಂದು ದೇಹದ ಅಂಗಾಂಗಗಳನ್ನು ಕಿತ್ತೊಯ್ಯುತ್ತಿದ್ದಾರೆ’ ಎಂಬ ಸಂದೇಶಗಳು ಕಳೆದೊಂದು ವಾರದಿಂದ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಇದು ವದಂತಿಯ ರೂಪ ತಾಳಿ, ಹಲವೆಡೆ ಗ್ರಾಮಸ್ಥರು ರಾತ್ರಿ– ಹಗಲು ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ. ಗ್ರಾಮಗಳಿಗೆ ಅಪರಿಚಿತರು ಬಂದರೆ ಅನುಮಾನದಿಂದ ನೋಡಲಾಗುತ್ತಿದೆ. ಹಿಡಿದು ವಿಚಾರಿಸುವುದು, ಬಾಗಿಲು ಹಾಕಿಕೊಳ್ಳುವುದು ಕಂಡುಬಂದಿದೆ.
*
ವದಂತಿ ನಂಬಬೇಡಿ: ಎಸ್‌ಪಿ
‘ಕೂಡಲಸಂಗಮದಲ್ಲಿ ಸಿಕ್ಕಿರುವ ಬಾಲಕನ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ದೇಹದ ಅಂಗಾಂಗಗಳನ್ನು ಪ್ರಾಣಿಗಳು ತಿಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ತನಿಖೆಯಿಂದ ಸತ್ಯಾಂಶ ಹೊರಬರಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹೇಳಿದರು.

ADVERTISEMENT

‘ಜಿಲ್ಲೆಗೆ ಯಾವುದೇ ಮಕ್ಕಳ ಕಳ್ಳರು ಬಂದಿಲ್ಲ. ಅಂತಹ ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.