ADVERTISEMENT

ಕೆಎಸ್‌ಒಯುಗೆ ಮಾನ್ಯತೆ

ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಕೆಎಸ್‌ಒಯುಗೆ ಮಾನ್ಯತೆ
ಕೆಎಸ್‌ಒಯುಗೆ ಮಾನ್ಯತೆ   

ಬೆಂಗಳೂರು: ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) 2017–18ನೇ ಸಾಲಿನ ತಾಂತ್ರಿಕೇತರ ಕೋರ್ಸ್‌ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಹೈಕೋರ್ಟ್ ನಿರ್ದೇಶಿಸಿದೆ.

ಇದರಿಂದಾಗಿ ಕೆಎಸ್‌ಒಯುಗೆ ಸಂಬಂಧಿಸಿದಂತೆ ಸದ್ಯ ವಾಜ್ಯದಲ್ಲಿರುವ ಹಲವು ಅರ್ಜಿಗಳಿಗೆ ಈ ಆದೇಶ ದಿಕ್ಸೂಚಿಯಾಗಲಿದೆ ಎಂದೇ ಭಾವಿಸಲಾಗಿದೆ.

ಕೆಎಸ್‌ಒಯು ಕೋರ್ಸ್‌ಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಯುಜಿಸಿ 2013ನೇ ಸಾಲಿನಿಂದ ರದ್ದುಪಡಿಸಿತ್ತು. ಅಲ್ಲಿಂದ ಇಲ್ಲಿವರೆಗೂ ವಿ.ವಿಗೆ ಮಾನ್ಯತೆ ಸಿಕ್ಕಿಲ್ಲ. ಈಗ ಹೈಕೋರ್ಟ್‌ನ ಆದೇಶ ವಿದ್ಯಾರ್ಥಿಗಳು ಮತ್ತು ಕೆಎಸ್‌ಒಯುಗೆ ನಿರಾಳ ಭಾವ ಮೂಡಿಸಿದೆ.

ADVERTISEMENT

ಕೆಎಸ್‌ಒಯುನ ವಿವಿಧ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಯುಜಿಸಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ದೇಶದ ಬೇರೆ ಬೇರೆ ವಿವಿಗಳಿಗೆ ಅವಧಿ ಮೀರಿದ ಬಳಿಕವೂ ಮಾನ್ಯತೆ ನೀಡಬಹುದಾದರೆ ಕೆಎಸ್‌ಒಯುಗೆ ಏಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಕೆಎಸ್‌ಒಯು ಮನವಿ ತಿರಸ್ಕರಿಸಲು ಯುಜಿಸಿ ಅಧಿಕಾರಿಗಳು ನೀಡಿರುವ ಕಾರಣ ತೃಪ್ತಿಕರವಾಗಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

‘ಯಾವುದೇ ಅಧ್ಯಯನ ಕೇಂದ್ರಗಳಲ್ಲದೇ ನೇರವಾಗಿ ವಿಶ್ವವಿದ್ಯಾಲಯದಲ್ಲಿ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ 2017–18ನೇ ಸಾಲಿಗೆ ಮಾನ್ಯತೆ ನೀಡಬೇಕು’ ಎಂದು ಯುಜಿಸಿಗೆ ನಿರ್ದೇಶಿಸಿತು.

ಅರ್ಜಿದಾರರ ಪರವಾಗಿ ರಾಜೇಂದರ್‌ ಕುಮಾರ್ ಸುಂಗೆ ಟಿ.ಪಿ ಹಾಗೂ ಯುಜಿಸಿ ಪರವಾಗಿ ಕ್ಯಾಪ್ಟನ್‌ ಅರವಿಂದ ಶರ್ಮಾ ಹಾಜರಿದ್ದರು.

2017–18ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ನೀಡಬೇಕು, 2013–14 ಹಾಗೂ 2014–15ನೇ ಸಾಲಿನ 96 ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನೋಂದಣಿಯಾದ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ನೀಡಬೇಕು ಎಂದು ವಿ.ವಿ ಸರ್ಕಾರಕ್ಕೆ ಪತ್ರ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.