ADVERTISEMENT

ಕೆಜೆಪಿ ವಿವಾದ: ಕಾಯ್ದಿರಿಸಿದ ಆದೇಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರೇ ಕೆಜೆಪಿ ಅಧ್ಯಕ್ಷ ಎಂದು ಕೇಂದ್ರ ಚುನಾವಣಾ ಆಯೋಗ ನೀಡಿರುವ ಆದೇಶ ರದ್ದು ಮಾಡಬೇಕು ಎಂದು ಕೋರಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಸಲ್ಲಿಸಿರುವ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಪ್ರಸನ್ನ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಸೋಮವಾರ ನಡೆಸಿದರು.

`ಕೆಜೆಪಿಯ ಅಧ್ಯಕ್ಷ ನಾನೇ' ಎಂದು ಪ್ರತಿಪಾದಿಸಿ ಪ್ರಸನ್ನ ಕುಮಾರ್ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಆಯೋಗವು, ಯಡಿಯೂರಪ್ಪ ಮತ್ತು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯ ಕುಮಾರ್ ಅವರಿಂದ ದಾಖಲೆಗಳನ್ನು ತರಿಸಿಕೊಂಡಿತ್ತು. ಯಡಿಯೂರಪ್ಪ ಅವರೇ ಪಕ್ಷದ ಅಧ್ಯಕ್ಷರು ಎಂದು ಸ್ಪಷ್ಟನೆ ನೀಡಿತ್ತು.

`ನಾನು (ಪ್ರಸನ್ನ ಕುಮಾರ್) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಧನಂಜಯ ಕುಮಾರ್ ಹೇಳುತ್ತಿದ್ದಾರೆ. ಆದರೆ ನನ್ನ ಹೆಸರಿನಲ್ಲಿ ನಕಲಿ ರಾಜೀನಾಮೆ ಪತ್ರ ಸಿದ್ಧಪಡಿಸಲಾಗಿದೆ' ಎಂದು ಪ್ರಸನ್ನ ಅರ್ಜಿಯಲ್ಲಿ ದೂರಿದ್ದರು. ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ಕೆಜೆಪಿಯ ಕಾರ್ಯಕಾರಿ ವ್ಯವಸ್ಥಾಪಕ ಮಂಡಳಿ ಯಾವುದೇ ನಿರ್ಣಯ ಅಂಗೀಕರಿಸಿಲ್ಲ ಎಂದು ಉಲ್ಲೇಖಿಸಿದ್ದರು.

ವಿಚಾರಣೆ ಮುಂದಕ್ಕೆ: ಕೇಂದ್ರ ಚುನಾವಣಾ ಆಯೋಗ ಕೆಜೆಪಿಗೆ ನೀಡಿರುವ ಮಾನ್ಯತೆ ರದ್ದು ಮಾಡಬೇಕು ಎಂದು ಕೋರಿ ಹೊಟ್ಟೆಪಕ್ಷದ ರಂಗಸ್ವಾಮಿ ಪುತ್ರ ರಾಜೇಂದ್ರ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಲಾಗಿದೆ.

`ಹೊಟ್ಟೆಪಕ್ಷದ ರಂಗಸ್ವಾಮಿ ಪುತ್ರ ಎಂದು ಪದ್ಮನಾಭ ಹೇಳಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೆ ನೀಡಿರುವ ದಾಖಲೆಗಳಲ್ಲೂ ಅವರು ಇದೇ ಅಂಶ ಉಲ್ಲೇಖಿಸಿದ್ದಾರೆ. ಆಯೋಗಕ್ಕೆ ತಪ್ಪು ಮಾಹಿತಿ ನೀಡಿ, ಕೆಜೆಪಿಗೆ ಮಾನ್ಯತೆ ಪಡೆದುಕೊಂಡಿದ್ದಾರೆ. ಆದರೆ ರಂಗಸ್ವಾಮಿ ಪುತ್ರ ನಾನೇ ಹೊರತು ಪದ್ಮನಾಭ ಅಲ್ಲ' ಎಂದು ರಾಜೇಂದ್ರ ಕುಮಾರ್ ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.